ಬೆಂಗಳೂರು : ಬೆಂಗಳೂರು ನಗರ ಟ್ರಾಫಿಕ್ (ಸಂಚಾರ) ಸುಗಮತೆ, ಸಮಸ್ಯೆಗಳು, ಹೆಚ್ಚುತ್ತಿರುವ ಅಪಘಾತ ಹಾಗೂ ಟೋಯಿಂಗ್ ವಿಚಾರ ಕುರಿತಂತೆ ಚರ್ಚಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಮಹತ್ವದ ಸಭೆ ಕರೆದಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ, ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಟೋಯಿಂಗ್ ಬಗ್ಗೆ ಗೃಹ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ವಾಹನ ತಪಾಸಣೆ ನೆಪದಲ್ಲಿ ಸಂಚಾರ ಪೊಲೀಸರು ರಸ್ತೆ ಮಧ್ಯೆ ಬಂದು ವಾಹನಗಳನ್ನು ತಡೆಯುತ್ತಿದ್ದಾರೆ. ಇದರಿಂದ ಹಲವು ಕಡೆ ಅಪಘಾತಗಳು ಸಹ ಸಂಭವಿಸಿದ್ದು, ಇದ ಬಗ್ಗೆಯೂ ಕೂಡ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಜೊತೆಗೆ ನಗರದಲ್ಲಿ ಇತ್ತೀಚಿಗೆ ಅಪಘಾತಗಳು ಹೆಚ್ಚುತ್ತಿದ್ದು, ಸಂಚಾರ ಸಮಸ್ಯೆಗಳ ಬಗ್ಗೆಯೂ ಅಧಿಕಾರಿಗಳ ಜೊತೆ ಗೃಹ ಸಚಿವರು ಸಮಾಲೋಚನೆ ನಡೆಸಲಿದ್ದಾರೆ.
ಈಗಾಗಲೇ ಟೋಯಿಂಗ್ ಕಾರ್ಯಾಚರಣೆ ಸ್ಥಗಿತವಾಗಿದ್ದು, ಇಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಹೊಸ ಮಾರ್ಗಸೂಚಿ ರೂಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ