ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನದ ವೇಳೆ ಕರ್ತವ್ಯ ನಿರ್ಹಿಸುತ್ತಿದ್ದ ವೇಳೆ ಗಾಯಗೊಂಡಿದ್ದ ಪೊಲೀಸ್ ಪೇದೆಯ ಆರೋಗ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೂರವಾಣಿ ಮೂಲಕ ವಿಚಾರಿಸಿದರು.
ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ತಿಳಿದ ಕ್ಷಣದಿಂದ ಅವರ ಅಂತ್ಯಕ್ರಿಯೆ ನಡೆಯುವವರೆಗೂ ಪೊಲೀಸ್ ಇಲಾಖೆ ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದೆ. ಈ ನಡುವೆ ಪುನೀತ್ ಅಂತಿಮ ದರ್ಶನದ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.
ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಗಣೇಶ್ ನಾಯಕ್ ಕಾಲು ಮುರಿತಕ್ಕೆ ಒಳಗಾಗಿದ್ದರು. ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ನೋವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಗಣೇಶ್ ಅವರ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಸಂಪೂರ್ಣ ಚಿಕಿತ್ಸಾ ವೆಚ್ಚ ಹಾಗೂ ಅಗತ್ಯವಿದ್ದರೆ ಉನ್ನತಮಟ್ಟದ ಚಿಕಿತ್ಸೆಯನ್ನು ಇಲಾಖೆಯಿಂದಲೇ ಕಲ್ಪಿಸಲು ಭರವಸೆ ನೀಡಿದರು.
ಸದ್ಯ ಗಣೇಶ್ ನಾಯಕ್ ಮಲ್ಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಪ್ರಸ್ತುತ ಹೊಸೂರು ರಸ್ತೆಯಲ್ಲಿರುವ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಭೂತಾಯಿಯ ಮಡಿಲು ಸೇರಿದ ಭಾಗ್ಯವಂತ: ಮತ್ತೆ ಹುಟ್ಟಿ ಬನ್ನಿ ಅಪ್ಪು