ಬೆಂಗಳೂರು: ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಬೊಮ್ಮಾಯಿ ನಾಯಕತ್ವ ಒಪ್ಪಲು ಬಿಜೆಪಿಯ ಹಿರಿಯ ನಾಯಕರು ಸಿದ್ಧರಿಲ್ಲ, ಹಾಗಾಗಿ ಎಲ್ಲರೂ ಸಾಮೂಹಿಕ ನಾಯಕತ್ವದ ಮಂತ್ರ ಜಪಿಸಲು ಶುರು ಮಾಡಿದ್ದಾರೆ.
ಸಂಘ ಪರಿವಾರದ ಹಿನ್ನೆಲೆ ಇಲ್ಲದ, ಮೂಲ ಬಿಜೆಪಿಗರೂ ಅಲ್ಲದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದನ್ನೇ ಅರಗಿಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರಿಗೆ ಇನ್ನೂ ಆಗಿಲ್ಲ. ಅದರ ಬೆನ್ನಲ್ಲೇ ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ಬೊಮ್ಮಾಯಿ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಹೋಗಲು ಸುತಾರಾಂ ಸಿದ್ಧರಿಲ್ಲದ ಹಿರಿಯ ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ ಅಮಿತ್ ಶಾ ಹೇಳಿಕೆಯನ್ನು ಒಪ್ಪದೆ ಸಾಮೂಹಿಕ ನಾಯಕತ್ವದ ಹೇಳಿಕೆ ನೀಡುತ್ತಿದ್ದಾರೆ.
ಬಿಜೆಪಿಯಲ್ಲಿ ಮೂಡುತ್ತಿದೆಯಾ ಒಡಕು?
ಅಮಿತ್ ಶಾ ಹೇಳಿಕೆ ನಂತರ ರಾಜ್ಯ ಬಿಜೆಪಿ ಪಾಳಯದಲ್ಲಿ ಹೇಳಿಕೆ ಪ್ರತಿ ಹೇಳಿಕೆಗಳು ವ್ಯಕ್ತವಾಗುತ್ತಿದ್ದು, ಕೆಲ ನಾಯಕರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸಮರ್ಥಿಸಿಕೊಳ್ಳಬೇಕೋ, ವಿರೋಧಿಸಬೇಕೋ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ. ಇದೆಲ್ಲಾ ಪಕ್ಷದಲ್ಲಿ ಒಡಕು ಮೂಡಲು ಕಾರಣವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಬಿಜೆಪಿ ನಾಯಕರ ಪ್ರತಿಕ್ರಿಯೆಗಳು:
ಅಮಿತ್ ಶಾ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ? ಏನು ಹೇಳಿದ್ದಾರೆ ನೋಡೋಣ. ಆದರೆ ಮುಂಬರುವ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದ ಬಗ್ಗೆ ನಮಗೆ ಒಲವಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಮುಂದಿನ ಚುನಾವಣೆ ಕುರಿತು ನಾವೆಲ್ಲ ಚರ್ಚೆ ನಡೆಸಿ ಒಟ್ಟಿಗೆ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಸಾಮೂಹಿಕ ನಾಯಕತ್ವ ಸಂದೇಶ:
ಒಬ್ಬ ವ್ಯಕ್ತಿಯ ನಾಯಕತ್ವ ಅಥವಾ ಮುಖ್ಯಮಂತ್ರಿ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ. ಈವರೆಗೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಗೆ ಬೊಮ್ಮಾಯಿ ನಾಯಕತ್ವ ಅಲ್ಲ, ಸಾಮೂಹಿಕ ನಾಯಕತ್ವ ಎನ್ನುವ ಸಂದೇಶ ಸಾರಿದ್ದಾರೆ.
ಜಗದೀಶ್ ಶೆಟ್ಟರ್ ಅಸಮಾಧಾನ:
ಚುನಾವಣೆ ಇನ್ನೂ ದೂರವಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗಿದೆ ಅಷ್ಟೇ. ಇಷ್ಟು ಕಡಿಮೆ ಅವಧಿಯಲ್ಲಿ ಸರ್ಕಾರ ಪಾಸು-ಫೇಲು ಎಂದು ನಿರ್ಧಾರ ಮಾಡಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಾವು ಮುಂದುವರಿಯುತ್ತೇವೆ. ಆದರೆ ಮುಂದಿನ ಚುನಾವಣೆ ಇನ್ನೂ ದೂರ ಇದೆ. ಜೊತೆಗೆ ಸರ್ಕಾರದಲ್ಲಿ ಹಿರಿಯರನ್ನು ಕಡೆಗಣಿಸಿದ ಬಗ್ಗೆ ಈಗಾಗಲೇ ನಾವು ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ ಎಂದು ಜಗದೀಶ್ ಶೆಟ್ಟರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ ಹೋಗುವುದಾಗಿ ಅಮಿತ್ ಶಾ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ಬೇರೆ ರೀತಿ ಅರ್ಥೈಸಬೇಕಿಲ್ಲ. ಮುಖ್ಯಮಂತ್ರಿ ಆಗಿರುವವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಸಹಜ. ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಡೆಗಣಿಸುವಂತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮರ್ಥಿಸಿಕೊಂಡಿದ್ದಾರೆ.
ಸಚಿವರಿಂದ ಸಮರ್ಥನೆ:
ಸಚಿವರಾದ ಸೋಮಣ್ಣ, ಅಶೋಕ್ ಕೂಡ ಬೊಮ್ಮಾಯಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಮಿತ್ ಶಾ ಹೇಳಿಕೆ ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಯಾರು ಮುಖ್ಯಮಂತ್ರಿ ಆಗಿರುತ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಸಂಪ್ರದಾಯ. ಹೀಗಾಗಿ ಅವರ ಹೇಳಿಕೆಯನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಪಕ್ಷದಲ್ಲಿ ನಾಯಕರು ಇದ್ದಾಗ ಅವರ ಮುಂದಾಳತ್ವದಲ್ಲಿ ಎಲ್ಲ ನಡೆದುಕೊಂಡು ಹೋಗುತ್ತದೆ. ಈಗ ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಇದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷ ನಡೆಯುತ್ತಿದೆ ಎಂದು ಅಶ್ವತ್ಥನಾರಾಯಣ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ತಿಳಿಸಿದ್ದಾರೆ.
ಬಿಎಸ್ವೈ ಮೊರೆ ಹೋದ ನಾಯಕರು:
ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಅಮಿತ್ ಶಾ ಹೇಳಿಕೆ ವಿರೋಧಿಸಿ ಯಡಿಯೂರಪ್ಪ ಮೊರೆ ಹೋಗಿದ್ದಾರೆ. ತರಾತುರಿಯಲ್ಲಿ ನಾಯಕತ್ವದ ಘೋಷಣೆ ಮಾಡುವ ಅಗತ್ಯವೇನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದಕ್ಕೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಸಿದ್ದರಿಲ್ಲ, ಎರಡನೇ ಹಂತದ ನಾಯಕರು ಅಮಿತ್ ಶಾ ವಿರುದ್ಧ ನಿಲುವು ತಾಳಲು ಸಾಧ್ಯವಿಲ್ಲದೇ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬೊಮ್ಮಾಯಿ ನಾಯಕತ್ವ ಪರ ಮತ್ತು ವಿರುದ್ಧದ ಬಣಗಳು ರಾಜ್ಯ ಬಿಜೆಪಿಯಲ್ಲಿ ಹುಟ್ಟಿಕೊಂಡಿರುವುದು ಸ್ಪಷ್ಟವಾಗಿದ್ದು, ಭವಿಷ್ಯದಲ್ಲಿ ಬಿಜೆಪಿಗೆ ಇದೇ ಮುಳುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.