ಬೆಂಗಳೂರು : ರಾಜ್ಯದ ಪೊಲೀಸ್ ಇಲಾಖೆ ಹೊರತುಪಡಿಸಿ ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗೃಹ ರಕ್ಷಕ ದಳದವರಿಗೆ ನೀಡಲಾಗುತ್ತಿರುವ ಕರ್ತವ್ಯ ಭತ್ಯೆಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎ. ಮಂಜುನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರದಲ್ಲಿ 455 ರಿಂದ 600 ರೂ. ಇತರ ಸ್ಥಳಗಳಲ್ಲಿ ₹380 ರಿಂದ 600 ರೂ.ಗೆ ಕರ್ತವ್ಯ ಭತ್ಯೆ ಹೆಚ್ಚಿಸುವ ಪ್ರಸ್ತಾವವಿದೆ ಎಂದು ಹೇಳಿದರು.
ಪೊಲೀಸ್ ಪೇದೆಗಳ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕರಿಗೆ ಮಾತ್ರ 2020 ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕರ್ತವ್ಯ ಅಥವಾ ದಿನಭತ್ಯೆಯನ್ನು 750 ರೂ.ಗೆ ಹೆಚ್ಚಿಸಲು ಮಂಜೂರಾತಿ ನೀಡಲಾಗಿದೆ ಎಂದರು.
ತರಬೇತಿ ಸಂದರ್ಭದಲ್ಲಿ ಗಾಯಗೊಂಡರೆ 21 ಸಾವಿರದವರೆಗೆ ಶಾಶ್ವತವಾಗಿ ಸಂಭವಿಸಿದ ದೈಹಿಕ ಹಾನಿ. ಶೇ. 60ಕ್ಕಿಂತ ಕಡಿಮೆ ಇದ್ದರೆ 2 ಲಕ್ಷ ರೂ. ಶೇ. 60ಕ್ಕಿಂತ ಜಾಸ್ತಿ ಇದ್ದರೆ 3 ಲಕ್ಷ ರೂ. ಎಕ್ಸ್‌ಗ್ರೇಷಿಯಾವನ್ನು ಹಾಗೆಯೇ ದುರ್ಮರಣವಾದರೆ ಐದು ಲಕ್ಷ ರೂ. ಪರಿಹಾರ ಧನ ಪಾವತಿಸಲಾಗುತ್ತಿದೆ.
ಗೃಹ ರಕ್ಷಕರ ಕಲ್ಯಾಣ ನಿಧಿಯ ಸದಸ್ಯರಾದ ಗೃಹ ರಕ್ಷಕರಿಗೆ ವೈದ್ಯಕೀಯ ವೆಚ್ಚ/ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮೃತರಾದರೆ ಕಲ್ಯಾಣ ನಿಧಿಯು ಸದಸ್ಯರ ಕಟುಂಬಕ್ಕೆ 15 ಸಾವಿರ ರೂ. ಇತರ ಸಂದರ್ಭಗಳಲ್ಲಿ ಮರಣ ಹೊಂದಿದ ಗೃಹ ರಕ್ಷಕ ಕುಟುಂಬಕ್ಕೆ 10 ಸಾವಿರ ರೂ. ಧನ ಸಹಾಯ ನೀಡಲಾಗುತ್ತಿದೆ ಎಂದು ವಿವರಿಸಿದರು.
ಉತ್ತಮ ಸೇವೆ ಸಲ್ಲಿಸಿದ ಸದಸ್ಯರಿಗೆ ನಗದು ಬಹುಮಾನ, ರಾಷ್ಟ್ರಪತಿ, ಮುಖ್ಯಮಂತ್ರಿಗಳ ಪದಕವವನ್ನು ನೀಡಲಾಗುತ್ತದೆ. ಪ್ರಸ್ತುತ 26,317 ಗೃಹ ರಕ್ಷಕ ಸ್ವಯಂಸೇವಕ ಸದಸ್ಯರಿದ್ದು, ನೋಂದಣಿಯಾಗಿದ್ದಾರೆ. ಎಲ್ಲರಿಗೂ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರತಿಯೊಬ್ಬರಿಗೂ ಸರದಿ ಆಧಾರದ ಮೇರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದರು.
ದೇವನಹಳ್ಳಿ ಠಾಣೆಗೆ ಸೇರಿಸಲು ಕ್ರಮ : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯು ಬಸ್ ನಿಲ್ದಾಣದಿಂದ 500 ಮೀಟರ್ಗಳ ಅಂತರದಲ್ಲಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿದರು.
ಸಾರ್ವಜನಿಕರು ಪೊಲೀಸ್ ಠಾಣೆಗೆ ಹೋಗಿ ಬರಲು ಬಸ್, ಆಟೋ ಹಾಗೂ ಟ್ಯಾಕ್ಸಿ ಸೌಲಭ್ಯಗಳಿವೆ. ಹೀಗಾಗಿ, ಯಾವುದೇ ತೊಂದರೆ ಇಲ್ಲ. ಕನ್ನಮಂಗಲ ಗೇಟ್‍ಗೆ ಪೊಲೀಸ್ ಠಾಣೆ ಸ್ಥಳಾಂತರಿಸುವ ಹಾಗೂ ಹೊಸದಾಗಿ ಠಾಣೆ ನಿರ್ಮಿಸುವ ಅವಶ್ಯಕತೆ ಕಂಡು ಬರುವುದಿಲ್ಲ ಎಂದರು.
ಕನ್ನಮಂಗಲ, ಸಾದರಹಳ್ಳಿ, ಅಣ್ಣೇಶ್ವರ ಮತ್ತಿತರ ಗ್ರಾಮಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಮೇಲೆ ಸಾಕಷ್ಟು ಅಭಿವೃದ್ಧಿಯಾಗಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಪೊಲೀಸ್ ಠಾಣೆಗೆ ದೂರು ಕೊಡಲು ತೊಂದರೆಯಾಗುತ್ತಿದ್ದರೆ, ಆ ಗ್ರಾಮಗಳನ್ನು ದೇವನಹಳ್ಳಿ ಪೊಲೀಸ್ ಠಾಣೆಗೆ ತರುವುದಾಗಿ ಹೇಳಿದರು.
ಪಿಎಸ್‍ಐ(ಸಿವಿಲ್) ಹುದ್ದೆಯ ಮುಂಬಡ್ತಿಗೆ 70 : 30ರ ಅನುಪಾತ : ಪಿಎಸ್‍ಐ(ಸಿವಿಲ್) ಹುದ್ದೆಯ ಮುಂಬಡ್ತಿಗೆ 70:30ರ ಅನುಪಾತವನ್ನು ನಿಗದಿಪಡಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು. ಬಿಜೆಪಿ ಶಾಸಕ ಪಿ. ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪಿಎಸ್‍ಐ ಹುದ್ದೆಯು ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಯಾಗಿದೆ.
ಸಂಬಂಧಪಟ್ಟ ಠಾಣಾ ವ್ಯಾಪ್ತಿಯ ಸಂಪೂರ್ಣ ಕಾನೂನು ಮತ್ತು ಸಿವಿಲ್ ವ್ಯವಸ್ಥೆಯ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆ, ಅಪರಾಧ ಪ್ರಕರಣಗಳ ಪತ್ತೆ ಮತ್ತು ತನಿಖೆ ನಡೆಸುವುದು ಮುಖ್ಯ ಕರ್ತವ್ಯವಾಗಿದೆ.
ಈ ಕರ್ತವ್ಯಗಳನ್ನು ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಅಲ್ಲದೇ ತಾಂತ್ರಿಕ ನೈಪುಣ್ಯತೆಯುಳ್ಳ ಯುವ ಅಧಿಕಾರಿಗಳ ಅವಶ್ಯಕತೆ ಇರುವುದರಿಂದ ಶೇ.70:30ರಷ್ಟು ಅನುಪಾತವನ್ನು ನಿಗದಿಪಡಿಸಲಾಗಿದೆ ಎಂದರು.
50:50ಕ್ಕೆ ಮಾರ್ಪಡಿಸುವ ಪ್ರಸ್ತಾವನೆ ಇರುವುದಿಲ್ಲ. ಎಎಸ್‍ಐ ಹುದ್ದೆಯಿಂದ ಪಿಎಸ್‍ಐ ಹುದ್ದೆಗೆ ಮುಂಬಡ್ತಿ ಹೊಂದಲು ಹಾಲಿ ಇರುವ ನಾಲ್ಕು ವರ್ಷ ಅರ್ಹತಾದಾಯಕ ಸೇವೆಯನ್ನು ಮೂರು ವರ್ಷಕ್ಕೆ ಇಳಿಸುವ ಪ್ರಸ್ತಾವನೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.