ಬೆಂಗಳೂರು: ಪೊಲೀಸ್ ತಿದ್ದುಪಡಿ ಕಾಯ್ದೆಯನ್ನು ಉತ್ತಮ ಉದ್ದೇಶದಿಂದ ತಂದಿದ್ದೆವು. ಹೈಕೋರ್ಟ್ ಆದೇಶವನ್ನು ಪರಿಶೀಲಿಸಿ ಮತ್ತೊಮ್ಮೆ ಕಾಯ್ದೆ ತರುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆನ್ಲೈನ್ ಗೇಮಿಂಗ್, ಗ್ಯಾಮ್ಲಿಂಗ್ ನಿರ್ಬಂಧಿಸುವ ಪೊಲೀಸ್ ತಿದ್ದುಪಡಿ ಕಾಯ್ದೆ ರದ್ದುಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗ ಕೋರ್ಟ್ ನಿರ್ದೇಶನ ನೀಡಿದೆ. ಕೋರ್ಟ್ ಆದೇಶ ಪ್ರತಿ ತರಿಸಿ ಪರಿಶೀಲನೆ ಮಾಡುತ್ತೇವೆ. ಯಾವುದರ ಬಗ್ಗೆ ಹೇಳಿದೆ, ಯಾವ ಕಲಂ ತೆಗೆಯಬಹುದು ನೋಡ್ತೇವೆ. ಮತ್ತೊಮ್ಮೆ ತಿದ್ದುಪಡಿ ಮಾಡಿ ಅದನ್ನು ತರುತ್ತೇವೆ ಎಂದರು.
ಕೋರ್ಟ್ ಆರ್ಡರ್ ಅನ್ನು ನಾವು ಒಪ್ಪುತ್ತೇವೆ. ಕೋರ್ಟ್ ಸಂಪೂರ್ಣವಾಗಿ ಅವಕಾಶಕೊಟ್ಟಿಲ್ಲ. ಹಣ ಇಟ್ಟು ಆಡುವುದಕ್ಕೆ ಅವಕಾಶ ಕೊಟ್ಟಿಲ್ಲ. ಇದರ ಬಗ್ಗೆ ಮತ್ತೊಮ್ಮೆ ಕೂತು ಚರ್ಚೆ ಮಾಡ್ತೇವೆ. ಅನೇಕ ಕುಟುಂಬಗಳು ಆನ್ಲೈನ್ ಗ್ಯಾಬ್ಲಿಂಗ್ನಿಂದ ಬೀದಿಗೆ ಬಿದ್ದಿವೆ.
ಜನಸಾಮಾನ್ಯರ ರಕ್ಷಣೆಗೆ ಆನ್ಲೈನ್ ಗೇಮ್ ನಿಷೇಧ ಮಾಡಲಾಗಿತ್ತು. ಹಣ ಇಟ್ಟು ಆಡುವ ಗೇಮ್ ನಿಷೇಧ ಮಾಡಲಾಗಿತ್ತು. ಈಗ ಕೆಲವರು ನ್ಯಾಯಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯದ ತೀರ್ಪನ್ನು ನೋಡುತ್ತೇವೆ. ಕೋರ್ಟ್ ಆದೇಶ ಪಾಲನೆ ಮಾಡುವುದು ನಮ್ಮ ಬದ್ಧತೆ. ಅದನ್ನು ಖಂಡಿತವಾಗಿ ನಾವು ಮಾಡುತ್ತೇನೆ ಎಂದರು.
ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸರ್ಕಾರದ ಕರ್ತವ್ಯ ಮತ್ತು ಬದ್ಧತೆ. ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಸಮಸ್ಯೆ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ನಾವು ಪರಿಶೀಲನೆ ಮಾಡುತ್ತಿದ್ದೇವೆ ಎಂದರು.
ಕೆಲವು ಕಡೆ ಶಿಕ್ಷಕರ ಒಳಗೆ ಬಿಡ್ತಾಯಿಲ್ಲ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿ ಮತ್ತು ಅಧ್ಯಾಪಕರ ನಡುವೆ ಡಿವಿಜನ್ ಮಾಡುತ್ತಿರುವ ಸುದ್ದಿ ನಮ್ಮ ಗಮನಕ್ಕೆ ಬಂದಿದೆ. ಆ ಬಗ್ಗೆ ವಿಚಾರ ಮಾಡಿ ಒಂದು ಆದೇಶ ಕಳುಹಿಸುತ್ತೇನೆ ಎಂದು ತಿಳಿಸಿದರು.
ಹಿಜಾಬ್ ವಿವಾದದ ಬಗ್ಗೆ ಸದನದಲ್ಲಿ ಉತ್ತರ ಕೊಡಲಾಗುವುದು. ನಮಗೂ ಸಮವಸ್ತ್ರ ಪಾಲನೆ ವಿಚಾರದಲ್ಲಿ ಸ್ಪಷ್ಟತೆ ತರುವ ಸದುದ್ದೇಶ ಇದೆ. ಇವತ್ತು ಸದನದಲ್ಲಿ ಈ ವಿಚಾರ ಪ್ರಸ್ತಾಪ ಆಯ್ತು. ಅಗತ್ಯವಿರುವಷ್ಟು ಉತ್ತರ ಕೊಡಲಾಗಿದೆ. ಇನ್ನೂ ಹೆಚ್ಚಿನ ಉತ್ತರ ನಾವು ಕೊಡಲು ಶಕ್ತವಾಗಿದ್ದೇವೆ ಎಂದರು.