ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹುಸಿಬಾಂಬ್ ಇ-ಮೇಲ್ ಸದ್ದು ಮಾಡಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪಕ್ಕದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಗೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಶೈಕ್ಷಣಿಕ ಪ್ರವಾಸಿ ಸ್ಥಳ ಹಾಗೂ ಅತ್ಯುನ್ನತ ವಸ್ತು ಸಂಗ್ರಹಾಲಯಗಳ ಪೈಕಿ ಒಂದಾಗಿರುವ ಕಸ್ತೂರಬಾ ರಸ್ತೆಯಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ನಕಲಿ ಬಾಂಬ್ ಸಂದೇಶ ಬಂದಿದೆ. ಎಂದಿನಂತೆ ಇಂದು ಬೆಳಿಗ್ಗೆ 9 ಗಂಟೆಗೆ ಮ್ಯೂಸಿಯಂ ಗೇಟ್ ತೆರೆದ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದ್ದಾರೆ. ಅದರಲ್ಲಿನ ಒಂದು ಇ-ಮೇಲ್ ನೋಡುತ್ತಿದ್ದಂತೆ ಶಾಕ್ ಆಗಿದ್ದಾರೆ.
Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಟ್ಟಿರುವುದಾಗಿ ಉಲ್ಲೇಖವಾಗಿತ್ತು. ಮುಂದುವರೆದಂತೆ ಮ್ಯೂಸಿಯೊಳಗೆ ವಿವಿಧ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇವೆ. ಅದನ್ನು ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ನಾಳೆ ಬೆಳಗ್ಗೆ ಸ್ಫೋಟಗೊಳ್ಳಲಿದೆ. ಮ್ಯೂಸಿಯಂನಲ್ಲಿರುವ ಅಷ್ಟೂ ಜನ ಸಾಯುತ್ತಾರೆ. ನಾವು ಟೆರರಿಸರ್ಸ್ 111 ಎಂಬ ಸಂಘಟನೆಗೆ ಸೇರಿದವರು. ನಮ್ಮ ಗ್ರೂಪ್ ಹೆಸರನ್ನು ಮಾಧ್ಯಮದವರಿಗೆ ನೀಡಿ ಎಂದು ಕಿಡಿಗೇಡಿಗಳು ತಿಳಿಸಿದ್ದಾರೆ.
ಈ ಸಂಬಂಧ ತಕ್ಷಣ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಬಾಂಬ್ ನಿಶ್ಕ್ರಿಯ ದಳ ತಂಡ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತು ಕಂಡುಬಂದಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ ಖಾತ್ರಿ ಆಗುತ್ತಿದ್ದಂತೆ ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ: ಭಾರತೀಯ ವಸ್ತುಸಂಗ್ರಹಾಲಯಕ್ಕೆ ಬಾಂಬ್ ಬೆದರಿಕೆ