ಬೆಂಗಳೂರು: ರಾಜ್ಯದಲ್ಲಿ ಕುರುಬರನ್ನು ಕಡೆಗಣಿಸಿದ್ದಾರೆ, ಅದನ್ನು ನಮ್ಮ ಜನ ಮನಗಂಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಜನ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಎಚ್ಚರಿಕೆ ನೀಡಿದರು.
ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುರುಬ ಸಮುದಾಯದ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗ ಆಗಿರುವ ಹೋರಾಟ ನೋಡಿದ್ರೆ, ಲಕ್ಷಾಂತರ ಜನರನ್ನ ಸೇರಿಸಿ ಪಾದಯಾತ್ರೆ ಮಾಡಿರೋದು ಕೂಡಲ ಸಂಗಮ ಸ್ವಾಮೀಜಿ. ಯಾರೂ ಕೂಡ ಈ ರೀತಿ ಹೋರಾಟ ಮಾಡಿಲ್ಲ. ಮೀಸಲಾತಿ ಎಲ್ಲರಿಗೂ ಕೊಡುತ್ತೇವೆ ಅಂತ ಹೇಳ್ತಿದ್ದಾರೆ. ಮೀಸಲಾತಿಗೆ ಮಾನದಂಡವೇ ಇಲ್ಲವಾ.?. 2ಎ ಮೀಸಲಾತಿ ಸೇರಲು ಕುಲಶಾಸ್ತ್ರ ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ಆದರೆ ರಾಜ್ಯ ಸರ್ಕಾರ ಸುಭಾಷ್ ಆಡಿ ಅನ್ನೋ ಜಸ್ಟೀಸ್ ನೇಮಿಸಿ ಚುನಾವಣಾ ಗಿಮಿಕ್ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷ ವ್ಯವಸ್ಥಿತವಾಗಿ ಚರ್ಚೆ ಮಾಡಲಿದೆ. ಇದು ಕೇಂದ್ರ ಸರ್ಕಾರದಿಂದ ಆಗಬೇಕಿದೆ. ಈಗಾಗಲೇ ವರದಿ ಬಂದಿದೆ. ಕ್ಯಾಬಿನೆಟ್ನಲ್ಲಿ ಇದರ ಚರ್ಚೆಯಾಗಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ, ಬೊಮ್ಮಾಯಿ ಸರ್ಕಾರ ಇದನ್ನು ಲಘುವಾಗಿ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಶೆಡ್ಯೂಲ್ 9 ಗೆ ಸೇರಿಸಬೇಕು. ಅದು ಎಷ್ಟೋ ಜನರಿಗೆ ಗೊತ್ತಿಲ್ಲ. ಮಾಧ್ಯಮದವರು ಇದನ್ನ ತಿಳಿಸಬೇಕು. ಇರೋದು ನಾಲ್ಕು ಪರ್ಸೆಂಟ್ ಜನಾಂಗ, ಕೊಟ್ಟಿರೋದು ಶೇ 10 ಮೀಸಲಾತಿ. ಇಂತಹ ಕೆಟ್ಟ ಪರಿಸ್ಥಿತಿ ಇದೆ ಎಂದು ಕಿಡಿ ಕಾರಿದರು.
ಹಾಲುಮತ ಸಂಸ್ಕೃತಿ ವೈಭವ: ರಾಯಚೂರು ಜಿಲ್ಲೆಯ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ, ತಿಂಥಣಿ ಬ್ರಿಜ್ ಶ್ರೀಮಠದಲ್ಲಿ ಇದೇ ಜನವರಿ 12 13 ಹಾಗೂ 14 ರಂದು ಸಿದ್ದರಾಮನಂದ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ 16ನೇ ಹಾಲುಮತ ಸಂಸ್ಕೃತಿ ವೈಭವ-2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಾನಪದ, ನಾಟಕ ಸೇರಿದಂತೆ ವಿವಿಧ ಕಲೆಗಳಿಗೆ ಸರ್ಕಾರ ಅಕಾಡೆಮಿ ರೂಪಿಸಿ ಕಲೆಯ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ಡೊಳ್ಳು ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ಕರಡಿ ಕುಣಿತದಂತ ಹಲವಾರು ನೃತ್ಯ ಕಲೆಗಳು ಹಾಲುಮತ ಧರ್ಮದಲ್ಲಿ ಬೆಸೆದುಕೊಂಡಿದೆ. ಆದರೆ, ಹಾಲುಮತ ಧರ್ಮಕ್ಕೆ ಸಂಬಂಧಿಸಿದ ಈ 15ಕ್ಕೂ ಹೆಚ್ಚು ಕಲಾಪ್ರಕಾರಗಳು ಸರ್ಕಾರದಿಂದ ಕಡೆಗಣಿಸಲ್ಪಟ್ಟಿದೆ. ಅಕಾಡೆಮಿ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು, ಇದೇ 12 ರಂದು "ಹಾಲುಮತ ಕಲಾವಿದರ ಮತ್ತು ಕಲಾಪ್ರಕಾರಗಳ ಸಮಾವೇಶ' ವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಹೆಚ್ ವಿಶ್ವನಾಥ ಅವರು ವಹಿಸಲಿದ್ದಾರೆ ಎಂದರು.
ಜ.13 ರಂದು ಮುಂಜಾನೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ' ಹಾಗೂ ಮಧ್ಯಾಹ್ನ 'ಹಾಲುಮತ ಧರ್ಮ ವೈಶಿಷ್ಟ್ಯ ಹಾಗೂ ರಾಜ್ಯ ಯುವ ಕುರುಬ ಸಂಘದ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಸಮಾರಂಭ'ವನ್ನು ಕೇಂದ್ರ ಸಚಿವರಾದ ಭಗವಂತ ಖೂಬಾ ಉದ್ಘಾಟಿಸಲಿದ್ದು, ಕೆ.ಎಸ್ ಈಶ್ವರಪ್ಪ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.
ಪ್ರಶಸ್ತಿ ಪ್ರದಾನ: ಜ.14 ರಂದು 12:30 ಕ್ಕೆ 'ಪ್ರಶಸ್ತಿಗಳ ಪ್ರದಾನ ಸಮಾರಂಭ ಆಯೋಜನೆಗೊಂಡಿದ್ದು, ಹಾಲುಮತ ಭಾಸ್ಕರ ಪ್ರಶಸ್ತಿಗೆ ಅಡಿವೆಪ್ಪ ಮಹಾರಾಜರು, ಕನಕ ರತ್ನ ಪ್ರಶಸ್ತಿಗೆ ಪ್ರೊ.ಸಿದ್ದಣ್ಣ ಫಕೀರಪ್ಪ ಜಕಬಾಳ ಹಾಗೂ ಸಿದ್ದಶ್ರೀ ಪ್ರಶಸ್ತಿಗೆ ಚಿನ್ನಮ್ಮ ಮುದ್ದಮಗುಡ್ಡಿ ಭಾಜನರಾಗಿರುತ್ತಾರೆ ಎಂದರು. ಪುರಸ್ಕೃತರಿಗೆ ತಲಾ 50,000 ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಮೂರು ದಿನಗಳ ಕಾರ್ಯಕ್ರಮಕ್ಕೆ 11 ದೇವರ ಪಲ್ಲಕ್ಕಿಗಳು, ಹಲವಾರು ಪೂಜಾರಿಗಳು ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಸ್ಯಾಂಟ್ರೊ ರವಿ ಎಲ್ಲೇ ತಲೆಮರೆಸಿಕೊಂಡಿದ್ದರೂ ಶೀಘ್ರ ಬಂಧನ.. ಸಚಿವ ಆರಗ ಜ್ಞಾನೇಂದ್ರ