ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಹಾಗೂ ಪಾರಂಪರಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ದೊಡ್ಡ ಗಣೇಶನಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಶತಮಾನಗಳ ಇತಿಹಾಸ ಹೊಂದಿರುವ ಪರಿಷೆಯು ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುತ್ತದೆ.
ಈ ಬಾರಿಯ ಪರಿಷೆಗೆ ಸುಮಾರು ಆರೇಳು ಲಕ್ಷ ಜನರು ಬರುವ ನಿರೀಕ್ಷೆ ಇದೆ. ಇಲ್ಲಿನ ಸುತ್ತಮುತ್ತಲಿನ ರಸ್ತೆಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿವೆ. ಈ ಭಾಗದ ರಸ್ತೆಗಳ ಉದ್ದಕ್ಕೂ ಕಡಲೆಕಾಯಿ ರಾಶಿ ಕಂಗೊಳಿಸುತ್ತಿದೆ. ಆಟಿಕೆಗಳು, ತಿಂಡಿ ಮಾರಾಟಗಾರರಿಗೆ ಹಬ್ಬದ ಸಂಭ್ರಮ ಇಮ್ಮಡಿಸಿದೆ. ಸುಮಾರು 200ಕ್ಕೂ ಹೆಚ್ಚು ಮಂದಿ ಭದ್ರತಾ ಸಿಬ್ಬಂದಿಯನ್ನು ಪರಿಷೆಗೆ ನಿಯೋಜಿಸಲಾಗಿದೆ. ರಾಮಕೃಷ್ಣ ಆಶ್ರಮದಿಂದ ಎಪಿಎಸ್ ಕಾಲೇಜುವರೆಗೆ ಸುಮಾರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಬಾರಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಪರಿಷೆಯಲ್ಲಿ ತೆರೆಯಲಾಗಿದೆ. ಈಗಾಗಲೇ ಬಸವನಗುಡಿಗೆ ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಮಾಲೂರು, ಕೋಲಾರ ಸೇರಿದಂತೆ ಹಲವು ಭಾಗಗಳಿಂದ ಬಂದಿರುವ ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿದ್ದಾರೆ.
ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಸಂಪ್ರದಾಯದಂತೆ ಕಡಲೆಕಾಯಿ ಪರಿಷೆ ಮಾಡಿಕೊಂಡು ಬರಲಾಗಿದೆ. ಈ ಹಿಂದೆ ಜಮೀನು ಇತ್ತು ಅಲ್ಲಿಂದ ಕಡ್ಲೆಕಾಯಿ ತಂದು ಮಾರುತ್ತಿದ್ದರು. 2008ರಿಂದ ಹೊಸ ಆಯಾಮ ಕೊಟ್ಟಿದ್ದೇವೆ. ವಿಶೇಷವಾಗಿ 1 ವಾರದವರೆಗೂ ಜಾತ್ರೆ ನಡೆಯಲಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರು ಪರಿಷೆಗೆ ಬರುತ್ತಿದ್ದಾರೆ. ಇಂದು ಸಂಜೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ಮಾಡಲಾಗುತ್ತದೆ. ಭ್ರದತೆ ದೃಷ್ಟಿಯಿಂದ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ. ಸಂಚಾರ ದಟ್ಟಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ ಪರಿಷೆಗೆ ಚಾಲನೆ ನೀಡಿದ್ದೇವೆ. ಕಡಲೆ ಕಾಯಿ ಪರಿಷೆ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ನಮ್ಮ ನೆಲದ ಸಂಸ್ಕೃತಿ ಇಂದಿಗೂ ಜೀವಂತವಾಗಿರುವುದು ಈ ರೀತಿಯ ಆಚರಣೆಯಿಂದ. ಈ ವರ್ಷವೂ ಲಕ್ಷಾಂತರ ಜನರು ಭಾಗಿಯಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕತೆ ಉತ್ತೇಜನ ನೀಡುವಲ್ಲಿ ಮುಂದಾಗಿದ್ದಾರೆ. ಕಡಲೆ ಕಾಯಿ ಪರಿಷೆ ಸಾಕಷ್ಟು ವ್ಯಾಪಾರಿಗಳಿಗೆ ಆದಾಯ ಆಗಲಿದೆ. ಕೋಟ್ಯಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯಲಿದೆ ಎಂದು ಹೇಳಿದರು.
ಪರಿಷೆಯಲ್ಲಿ ಬೆಲ್ಲದ ಆಕರ್ಷಣೆ: ಇತ್ತೀಚಿನ ದಿನಗಳಲ್ಲಿ ಸಕ್ಕರೆ ಬಳಕೆ ಹೆಚ್ಚಾಗಿದೆ. ಇದರಿಂದ ರೋಗಗಳೂ ಹೆಚ್ಚಾಗಿವೆ. ಆರೋಗ್ಯಕರ ಮತ್ತು ರುಚಿಕರವಾದ ಬೆಲ್ಲದ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಡಲೆಕಾಯಿ ಪರಿಷೆಯಲ್ಲಿ ಮಂಡ್ಯ ಕೃಷಿ ಇಲಾಖೆ ಬೆಲ್ಲದ ಪರಿಷೆ ನಡೆಸುತ್ತಿದೆ. ರೋಲ್ ಬೆಲ್ಲ, ಗುಂಡು ಬೆಲ್ಲ, ಬಕೆಟ್ ಬೆಲ್ಲ, ಅಚ್ಚು ಬೆಲ್ಲ ಹೀಗೆ ತರಹೇವಾರಿ ಬೆಲ್ಲದುಂಡೆಗಳಿಂದ ಗೋಲಾಕಾರ, ಗೋಪುರ, ಗಾಣದ ಮನೆ, ಗಣಪತಿ ವಿಗ್ರಹ, ದೀಪಗಳು ಮತ್ತಿತರ ಕಲಾಕೃತಿಗಳನ್ನು ವಿನ್ಯಾಸಗೊಳಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಗಂಗಾವತಿ: ಭಿಕ್ಷಾಟನೆ ಹಣದಿಂದ ಎರಡು ಜೋಡಿಗಳಿಗೆ ಮದುವೆ ಮಾಡಿಸಿದ ಮಂಗಳಮುಖಿ!