ಬೆಂಗಳೂರು : ಭಾರತದ ಖ್ಯಾತ ಇತಿಹಾಸಕಾರ ಹಾಗೂ ಸಂಶೋಧಕರಾದ ಡಾ. ಷ ಶೆಟ್ಟರ್ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಡಾ. ಷ. ಶೆಟ್ಟರ್ ಇಂದು ಮುಂಜಾನೆ 3-15ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭೂಪಸಂದ್ರದಲ್ಲಿರುವ ನಿವಾಸದಲ್ಲಿ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆಂದು ಇಡಲಾಗಿದೆ. ಬಳಿಕ ಹೊಸಕೋಟೆಯಲ್ಲಿ ಅಂತ್ಯಸಂಸ್ಕಾರ ನಡೆಸುವ ಸಾಧ್ಯತೆ ಇದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಕೋರಿ ಟ್ವೀಟ್ ಮಾಡಿದ್ದು, "ಹಿರಿಯ ಇತಿಹಾಸಕಾರ ಮತ್ತು ಸಂಶೋಧಕ ಡಾ. ಎಸ್. ಶೆಟ್ಟರ್ ಅವರ ಸಾವಿನಿಂದ ಭಾರತೀಯ ವಿದ್ವತ್ ಲೋಕ ಬಡವಾಗಿದೆ. ಅವರು ಇನ್ನಷ್ಟು ಕಾಲ ಮಾರ್ಗದರ್ಶಕರಾಗಿ ನಮ್ಮ ಜೊತೆ ಇರಬೇಕಾಗಿತ್ತು. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು, ಅವರ ಶೋಕದಲ್ಲಿ ನಾನೂ ಭಾಗಿ" ಎಂದು ಬರೆದಿದ್ದಾರೆ.
ಡಾ. ಷ. ಶೆಟ್ಟರ್ ಸಂಕ್ಷಿಪ್ತ ವಿವರ : ಡಿಸೆಂಬರ್ 11, 1935 ಬಳ್ಳಾರಿ ಜಿಲ್ಲೆ ಹಂಪಸಾಗರದಲ್ಲಿ ಷ. ಶೆಟ್ಟರ್ ಜನಿಸಿದರು. ಮೈಸೂರು, ಧಾರವಾಡ, ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆದರು. ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡದ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
1960-96ರ ವರೆಗೆ ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ, 78-95ರ ವರೆಗೆ ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ, ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷರಾಗಿ, ಬೆಂಗಳೂರು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಡಾ. ಎಸ್ ರಾಧಾಕೃಷ್ಣ ಪ್ರಾಧ್ಯಾಪಕತ್ವ, ಮೊದಲಾದ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್‌ಗಳ ಸರ್ವಾಧ್ಯಕ್ಷ ಸ್ಥಾನ, ಮೆಲ್ಬರ್ನ್(ಆಸ್ಟ್ರೇಲಿಯಾ) ವಿಶ್ವ ಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಹಾಗೂ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತ್ವ ವಹಿಸಿಕೊಂಡಿದ್ದರು.
ಸಂದಿರುವ ಪ್ರಶಸ್ತಿ-ಪುರಸ್ಕಾರಗಳು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುಂದ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ, 2016ರ ಶಾಸ್ತ್ರೀಯ ಕನ್ನಡ ವಾಙ್ಮಯದ ರಾಷ್ಟ್ರಪತಿ ಪ್ರಶಸ್ತಿ ಸೇರಿ ಹಲವಾರು ಗೌರವಗಳು ಸಂದಿವೆ.
ಸದ್ಯ ನಿಧನಕ್ಕೂ ಮುನ್ನ ಅವರು ಹಳಗನ್ನಡ, ವಚನ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು.