ಬೆಂಗಳೂರು: ದೇವತೆಗಳ ಚಿತ್ರಗಳು ಮತ್ತು ರಾಷ್ಟ್ರ ಪುರುಷರ ಚಿತ್ರಗಳು ಇರುವಂತಹ ಪಟಾಕಿ ಮತ್ತು ಚೀನಾ ನಿರ್ಮಿತ ಪಟಾಕಿಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯು ಬೆಂಗಳೂರು ಪೋಲಿಸ್ ಕಮೀಷನರ್ ಭಾಸ್ಕರ ರಾವ್ ಅವರಿಗೆ ಮನವಿ ಮಾಡಿದೆ.
ಆಯುಕ್ತರಿಗೆ ಮನವಿ ನೀಡುವ ಮುನ್ನ ಮಾತನಾಡಿದ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ದೀಪಾವಳಿ ನಿಮಿತ್ತ ಮಾರುಕಟ್ಟೆಯಲ್ಲಿ ಶ್ರೀ ಲಕ್ಷ್ಮಿ ಬಾಂಬ್, ಶ್ರೀಕೃಷ್ಣ ಬಾಂಬ್ ಜೊತೆಗೆ ವಿಷ್ಣು, ಅಯ್ಯಪ್ಪ ಸ್ವಾಮಿ ಮತ್ತು ವೆಂಕಟೇಶ್ವರ ದೇವರ ಚಿತ್ರಗಳಿರುವ ಪಟಾಕಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ. ಅದೇ ರೀತಿ ರಾಷ್ಟ್ರ ನಾಯಕರುಗಳಾದ ಸುಭಾಷ್ ಚಂದ್ರ ಬೋಸ್, ಲೋಕಮಾನ್ಯ ಬಾಲಗಂಗಾಧರ ತಿಲಕ್ರ ಚಿತ್ರ ಇರುವ ಪಟಾಕಿಗಳನ್ನು ಸಹ ಮಾರಾಟ ಮಾಡಲಾಗುತ್ತದೆ. ಇನ್ನು ಇಂತಹ ಪಟಾಕಿಗಳು ಸಿಡಿದಾಗ ಅವುಗಳ ಮೇಲಿರುವ ಚಿತ್ರಗಳೂ ಕೂಡ ಆಕಾರವಿಲ್ಲದೆ ವಿಕಾರವಾಗಿ ಛಿದ್ರ ಛಿದ್ರವಾಗುತ್ತವೆ. ನಂತರ ಚರಂಡಿ, ದಾರಿಯಲ್ಲೆಲ್ಲಾ ಹರಡಿ ಎಲ್ಲರೂ ತುಳಿದು ಓಡಾಡುವುದರಿಂದ ದೇವತೆಗಳಿಗೆ, ಮಹಾನ್ ನಾಯಕರಿಗೆ ಅಪಮಾನ ಮಾಡಿದಂತಾಗುತ್ತದೆ. ಭಾರತೀಯ ದಂಡ ಸಂಹಿತೆ 295ರ ಪ್ರಕಾರ ಇದು ದಂಡನಾರ್ಹ ಅಪರಾಧವಾಗಿದೆ. ಹಾಗಾಗಿ ಇಂತಹ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಒತ್ತಾಯಿಸಿದರು.
ಅದೇ ರೀತಿ ಪರಿಸರಕ್ಕೆ ಅತ್ಯಂತ ಹಾನಿಕಾರಕವಾದ ಚೀನಾ ನಿರ್ಮಿತ ಪಟಾಕಿಗಳು ಬಹುದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಈಗಾಗಲೇ ಉಡುಪಿ ಜಿಲ್ಲಾಡಳಿತ ಚೀನಾ ನಿರ್ಮಿತ ಪಟಾಕಿಗಳನ್ನು ನಿಷೇಧಿಸಿದೆ. ಅದೇ ರೀತಿ ಬೆಂಗಳೂರು ಮಹಾನಗರದಲ್ಲಿ ಚೀನಾ ಪಟಾಕಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.