ಬೆಂಗಳೂರು : ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವ ಯಾವುದೇ ಪ್ರಯತ್ನ ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ರಾಸಾಯನ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿಯನ್ನು ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹೇರುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ಇಂತಹ ಆರೋಪ ಮಾಡಲಾಗುತ್ತಿದೆ ಎಂದರು.
1969ರಿಂದಲೂ ಎಲ್ಲವೂ ತ್ರಿಭಾಷಾ ಸೂತ್ರದ ಅನುಸಾರವೇ ನಡೆಯುತ್ತಿದೆ. ಎಲ್ಲಿಯೂ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಸಂಸತ್ ಸದಸ್ಯರನ್ನುದ್ದೇಶಿಸಿ ಮಾತನಾಡುವಾಗ ರಾಷ್ಟ್ರೀಯ ಗುರಿ ಸ್ಥಳೀಯ ಆಕಾಂಕ್ಷೆ ಎನ್ನುವ ಮಾತನ್ನೇ ಹೇಳಿದ್ದಾರೆ. ಸ್ಥಳೀಯ ವಿಷಯ ಹಾಗೂ ಸ್ಥಳೀಯ ಭಾಷೆ ದೇಶದ ಸ್ವತ್ತು ಎಂದಿದ್ದಾರೆ. ಹಾಗಾಗಿ ಹಿಂದಿ ಭಾಷೆಯನ್ನು ಹೇರುತ್ತಿದ್ದೇವೆ ಎನ್ನುವುದರಲ್ಲಿ ಸತ್ಯವಿಲ್ಲ, ಹಿಂದಿಭಾಷೆ ಹೇರುವ ಯಾವುದೇ ನಿರ್ಧಾರವನ್ನ ಕೇಂದ್ರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.