ಬೆಂಗಳೂರು: ಹಿಜಾಬ್ ನಿಷೇಧಿಸಿ ಆದೇಶಿಸಿದ್ದ ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ತಮಿಳುನಾಡಿನ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರಕರಣ ಸಂಬಂಧ ರಹಮತುಲ್ಲಾ ಹಾಗೂ ಜಮಾಲ್ ಮೊಹಮದ್ ಉಸ್ಮಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ಜಾಮೀನು ನೀಡಿದೆ.
ಅರ್ಜಿದಾರರಾದ ರಹಮತುಲ್ಲಾ ಮತ್ತು ಜಮಾಲ್ ಮೊಹಮದ್ ಉಸ್ಮಾನಿ ಅಲಿಯಾಸ್ ಜಮಾಲ್ ಮೊಹಮದ್ ಅವರು ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂಪಾಯಿಗಳ ಬಾಂಡ್, ಇಬ್ಬರ ಭದ್ರತೆ ನೀಡಬೇಕು. ವಿಚಾರಣೆಯ ಎಲ್ಲಾ ದಿನದಂದು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಬೇಕು. ತನಿಖೆಗೆ ಸಹಕರಿಸಬೇಕು ಮತ್ತು ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಸಾಕ್ಷಿಯನ್ನು ನಾಶಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮುಸ್ಲಿಮ್ ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಮಾರ್ಚ್ 15ರಂದು ತೀರ್ಪು ಪ್ರಕಟಿಸಿತ್ತು.
ತೀರ್ಪು ವಿರೋಧಿಸಿ ಹಲವು ಧಾರ್ಮಿಕ ಸಂಘಟನೆಗಳು ಹಲವು ಕಡೆ ಪ್ರತಿಭಟನೆ ನಡೆಸಿದ್ದವು. ಈ ನಡುವೆ ತಮಿಳುನಾಡು ತವ್ಹೀದ್ ಜಮಾತ್ (ಟಿಎನ್‌ಟಿಜೆ) ಆಡಿಟಿಂಗ್ ಸಮಿತಿಯ ಸದಸ್ಯ ರಹಮತುಲ್ಲಾ ಅವರು ಜಾರ್ಖಂಡ್‌ನಲ್ಲಿ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಕೊಲೆ ಮಾಡಿದರ ರೀತಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜಮಾಲ್ ಮೊಹಮದ್ ಉಸ್ಮಾನಿ ಅವರನ್ನು ತಾಂಜಾಪೂರ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ: ಆರೋಪಿಗೆ ಜಾಮೀನು ತಿರಸ್ಕರಿಸಿದ ಕೋರ್ಟ್