ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್ ಸಂತೋಷ್ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ನಗರದ ವಕೀಲ ಎಸ್ ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಎನ್.ಆರ್ ಸಂತೋಷ್ ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜನವರಿ 11ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ :
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತರಾಗಿರುವ ಎನ್ ಆರ್ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಸಂವಿಧಾನಬಾಹಿರ ಹಾಗೂ ಅಕ್ರಮ. ಇಂತಹ ಹುದ್ದೆಗೆ ನೇಮಕ ಮಾಡುವ ಕುರಿತು ಯಾವುದೇ ಶಾಸನ ಅಥವಾ ನಿಯಮಗಳಿಲ್ಲ. ಸಂವಿಧಾನದಲ್ಲಿಯೂ ಈ ವಿಚಾರವಿಲ್ಲ. ಹಾಗಿದ್ದೂ ಬೆಂಬಲಿಗರು ಹಾಗೂ ಸಂಬಂಧಿಕರಿಗಾಗಿ ಸೃಷ್ಟಿಸಿರುವ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜ್ಯದ ಸೇವೆ ಅಥವಾ ಕಾರ್ಯಚಟುವಟಿಕೆಯಲ್ಲಿ ಯಾವುದೇ ಕಾನೂನಾತ್ಮಕ ಸ್ಥಾನವಿಲ್ಲ.ಹಾಗಿದ್ದೂ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರು 2020ರ 28 ಮೇ ರಂದು ಹುದ್ದೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದನ್ನು ಆಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂತೋಷ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ವಿರೋಧ ಪಕ್ಷಗಳು ಮತ್ತು ಪಕ್ಷದ ಕಾರ್ಯಕರ್ತರ ವಿರೋಧದಿಂದಾಗಿ ನೇಮಕ ಜಾರಿಗೆ ಬಂದಿರಲಿಲ್ಲ. ಹೀಗಾಗಿ ಜೂನ್ 22 ರಂದು ಮತ್ತೆ ಸಿಎಂ ನೀಡಿದ ಲಿಖಿತ ಸೂಚನೆ ಮೇರೆಗೆ ಅಧಿಕಾರಿಗಳು ಮತ್ತೆ ನೇಮಕ ಮಾಡಿ ಆದೇಶಿಸಿದ್ದಾರೆ. ಈ ಮೂಲಕ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಶಾಸಕರೂ ಆಗಿರದ ಖಾಸಗಿ ವ್ಯಕ್ತಿ ಎನ್.ಆರ್ ಸಂತೋಷ್ ಗೆ ಇದೀಗ ಕ್ಯಾಬಿನೆಟ್ ಸ್ಥಾನಮಾನಗಳನ್ನು ನೀಡಲಾಗಿದೆ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ವ್ಯಯಿಸಲಾಗುತ್ತಿದೆ. ಆದ್ದರಿಂದ ನ್ಯಾಯಾಲಯ ಎನ್.ಆರ್ ಸಂತೋಷ್ ನೇಮಕ ಆದೇಶಕ್ಕೆ ಸಂಬಂಧಿಸಿದ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಬೇಕು ಹಾಗೂ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.