ಬೆಂಗಳೂರು: ಈ ಅಕ್ಟೋಬರ್ ತಿಂಗಳು ರಾಜ್ಯ ರಾಜಧಾನಿ ಕಳೆದ ಹತ್ತು ವರ್ಷದಲ್ಲೇ ಅತಿ ಹೆಚ್ಚು ಚಳಿಗೆ ಸಾಕ್ಷಿಯಾಗಿದೆ.
ನಿರಂತರ ಮಳೆ ಚಳಿಗಾಲಕ್ಕೆ ಮುನ್ನವೇ ಮಹಾನಗರವನ್ನು ನಡುಗಿಸಿದೆ.
ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತದ ಪರಿಣಾಮ ಅಕ್ಟೋಬರ್ 25 ರಂದು (ಮಂಗಳವಾರ) ಕರ್ನಾಟಕದಲ್ಲಿ 15. 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಆದರೆ ಬೆಂಗಳೂರಿನಲ್ಲಿ ಅಂದು 12.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 2018ರಲ್ಲಿ 16.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಈ ಹಿಂದಿನ ಗರಿಷ್ಠ. ಈ ಸಲ ಜನರು ಸೂರ್ಯಗ್ರಹಣದ ವೀಕ್ಷಣೆ, ಅದರಿಂದ ಎದುರಾಗುವ ಪರಿಣಾಮಗಳ ಕುರಿತು ಚಿಂತಿಸುತ್ತಿದ್ದರೇ ಹೊರತು ಚಳಿಯ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ.
ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಎಂ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದೆ. ಇದರಿಂದ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಅಕಾಲಿಕ ಮಳೆ ಹಾಗೂ ಹಿಂಗಾರು ಮಾರುತ ಬಂದಿದ್ದರಿಂದ ಭೂಮಿ ತೇವಾಂಶ ಹೆಚ್ಚಿಸಿಕೊಂಡಿದ್ದು, ಸಹಜವಾಗಿ ಚಳಿ ಹೆಚ್ಚಾಗಲು ಕಾರಣವಾಗಿದೆ. ಮಳೆ ಸಾಧ್ಯತೆ ಡಿಸೆಂಬರ್ ಅಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಸಾರಿಯ ಚಳಿಗಾಲ ಜೋರಾಗಿಯೇ ಇರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಳೆದ 50 ವರ್ಷಗಳಲ್ಲಿ ಇದೇ ಮೊದಲೆನ್ನುವಂತೆ ಬೆಂಗಳೂರಲ್ಲಿ ಮೈಕೊರೆಯುವ ಚಳಿ!