ಬೆಂಗಳೂರು : ಶ್ರೀ ಕಣ್ವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸೊಸೈಟಿಯ 170 ಆಸ್ತಿಗಳಲ್ಲಿ 60 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಸೊಸೈಟಿಯ ಅವ್ಯವಹಾರ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿ ಕೆ. ಎಸ್. ರಮೇಶ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಸೊಸೈಟಿಗೆ ಸಂಬಂಧಿಸ 170 ಆಸ್ತಿಗಳಲ್ಲಿ ಈವರೆಗೆ ಒಟ್ಟು 60 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಮತ್ತಷ್ಟು ಆಸ್ತಿ ಮುಟ್ಟುಗೋಲಿಗೆ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಠೇವಣಿದಾರರ ಹಣದಲ್ಲಿ ಸಾಕಷ್ಟು ಆಸ್ತಿ ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 400 ಕ್ಕೂ ಅಧಿಕ ದಾಖಲೆಗಳಿವೆ. ಅವುಗಳನ್ನು ವಶಕ್ಕೆ ಪಡೆದುಕೊಂಡು ಆಸ್ತಿ ಮುಟ್ಟುಗೋಲಿಗೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಹಾಗೆಯೇ ಸಕ್ಷಮ ಪ್ರಾಧಿಕಾರಕ್ಕೆ ಸಿಬ್ಬಂದಿ ಕೊರತೆ ಇದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಸರ್ಕಾರ ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯಾನುಸಾರ ಸಿಬ್ಬಂದಿ ಒದಗಿಸಬೇಕು. ಆಸ್ತಿ ಮುಟ್ಟುಗೋಲಿಗೆ ಕ್ರಮ ಜರುಗಿಸಬೇಕು. ಪ್ರಕರಣದ ತನಿಖಾಧಿಕಾರಿಗಳು ತನಿಖೆಯ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :
ಸೊಸೈಟಿಯು ತನ್ನ ಸದಸ್ಯರು ಮತ್ತು ಸಾರ್ವಜನಿಕರಿಂದ 2019ರ ಮಾರ್ಚ್ವರೆಗೂ ಒಟ್ಟು 642.31 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಕೆಲ ಕಂಪನಿಗಳಿ 416 ಕೋಟಿ ರೂ. ಸಾಲ ನೀಡಿದೆ. ಆದರೆ, ಕೊಟ್ಟಿರುವ ಸಾಲ ವಸೂಲಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಜತೆಗೆ ಆಡಳಿತ ಮಂಡಳಿ ಸದಸ್ಯರು ಅಕ್ರಮದಲ್ಲಿ ಭಾಗಿಯಾಗಿದ್ದು, ಇಡೀ ವಹಿವಾಟಿನ ಬಗ್ಗೆ ಫೊರೆನ್ಸಿಕ್ ಆಡಿಟ್ ಆಗಬೇಕೆಂದು ಅರ್ಜಿದಾರರು ಕೋರಿದ್ದಾರೆ.