ಬೆಂಗಳೂರು : ಕುಂಚಿಟಿಗ ಸಮುದಾಯವನ್ನು ಕೇಂದ್ರದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಮೈಸೂರಿನ ಕುಂಚಿಟಿಗ ಸಂಘದ ಕಾರ್ಯದರ್ಶಿ ಯೋಗೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಒಬಿಸಿ ಪಟ್ಟಿ ತಯಾರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಇತ್ತೀಚಿಗೆ ಸಂವಿಧಾನಕ್ಕೆ 127ನೇ ತಿದ್ದುಪಡಿ ತರಲಾಗಿದೆ. ಇದಕ್ಕೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಸಿಕ್ಕಿದೆ.
ಆದ್ದರಿಂದ, ಈಗ ಒಬಿಸಿ ಪಟ್ಟಿ ರಾಜ ಸರ್ಕಾರಗಳಿಂದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ಬರಬೇಕು. ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಪರಿಶೀಲನೆಯಲ್ಲಿದೆ ಎಂದು ಪೀಠಕ್ಕೆ ತಿಳಿಸಿದರು.
ವಾದ ಆಲಿಸಿದ ಪೀಠ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿತು.
ಇದನ್ನೂ ಓದಿ:ಶಾರುಕ್ ಪುತ್ರನ ಬಿಡುಗಡೆಗಾಗಿ ಹಣಕ್ಕೆ ಬೇಡಿಕೆ ಆರೋಪ: ಎನ್‌ಸಿಬಿಯ ಐವರ ತಂಡದಿಂದ ತನಿಖೆ