ಬೆಂಗಳೂರು: ಮಳೆಗಾಲದಲ್ಲಿ ಯಾವುದೇ ರಾಜ್ಯದ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನೆರೆ ರಾಜ್ಯದ ಜಲಾಶಯಗಳಿಗೆ ಹರಿಸುವಾಗ ನೀರು ಹರಿದು ಹೋಗುವ ರಾಜ್ಯಗಳಿಗೆ ಕಡ್ಡಾಯವಾಗಿ ಮೊದಲೇ ಮಾಹಿತಿ ನೀಡುವಂತೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಪಿಐಎಲ್ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೇಳೂರಿನ ಎ.ಮಲ್ಲಿಕಾರ್ಜುನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕೇಂದ್ರ ಗೃಹ ಸಚಿವಾಲಯ, ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತೀಯ ಹವಾಮಾನ ಇಲಾಖೆ, ಜಲ ಶಕ್ತಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ, ರಾಜ್ಯಗಳು ಪ್ರವಾಹ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದರೆ ಆ ರಾಜ್ಯಗಳಿಗೆ ಮೊದಲೇ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡುತ್ತಿರುವ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಸದ್ಯ ಅಂತಹ ವ್ಯವಸ್ಥೆ ನಮ್ಮಲ್ಲಿ ಇದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ತಿಳಿಸಿತು.
ಮಳೆಗಾಲ ಅಥವಾ ಪ್ರವಾಹದ ಸಂದರ್ಭಗಳಲ್ಲಿ ಒಂದು ರಾಜ್ಯದ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ನೆರೆ ರಾಜ್ಯದ ಜಲಾಶಯಗಳಿಗೆ ಹರಿಬಿಡುವಾಗ ಮುಂಚಿತವಾಗಿ ಮಾಹಿತಿ ನೀಡಬೇಕು. ಆದರೆ ಈ ಮಾಹಿತಿ ಹಂಚಿಕೊಳ್ಳುವಲ್ಲಿ ವಿಫಲವಾಗುತ್ತಿರುವುದರಿಂದ ರಾಜ್ಯಗಳ ನಡುವೆ ಅನಗತ್ಯ ಗೊಂದಲ ಮತ್ತು ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ 2009 ಮತ್ತು 2018 ರಲ್ಲಿ ಉಂಟಾದಂತಹ ಭೀಕರ ಪ್ರವಾಹದ ಸ್ಥಿತಿ ಮತ್ತೆ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಆದರೆ ಹೀಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಯಾವುದೇ ಕಾನೂನು ಅಥವಾ ನಿಯಮಗಳಿಲ್ಲ. ಹೀಗಾಗಿ ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.