ಬೆಂಗಳೂರು : ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಮಾದಕ ವಸ್ತು ಸಂಗ್ರಹಿಸಿದ್ದ ಆರೋಪದಡಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಆರ್.ಟಿ.ನಗರದ ಸಯ್ಯದ್ ಮಜೀದ್ ಹಾಗೂ ದೇವರ ಚಿಕ್ಕನಹಳ್ಳಿಯ ರಮೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾ.ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಹೆಚ್ಚುವರಿಯಾಗಿ ನೀಡಿರುವ 90 ದಿನಗಳ ನಂತರವೂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿಲ್ಲ. ಹೀಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವುದು ಸಮ್ಮತವಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ :
2019ರ ಡಿಸೆಂಬರ್ 28 ರಂದು ಮಾದಕ ವಸ್ತು ಸಂಗ್ರಹಿಸಿದ್ದ ಆರೋಪದಡಿ ಬೆಂಗಳೂರಿನ ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದರು.
ಎನ್ ಡಿಪಿಎಸ್ ನಿಯಮಗಳ ಪ್ರಕಾರ ಜೂನ್ 27ರೊಳಗೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರಲಿಲ್ಲ. ಆದಾಗ್ಯೂ ಪೊಲೀಸರ ಕೋರಿಕೆ ಮೇರೆಗೆ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯ ಹೆಚ್ಚುವರಿ 90 ದಿನಗಳ ಕಾಲಾವಕಾಶ ನೀಡಿತ್ತು. ಆದರೆ ಹೆಚ್ಚುವರಿ 90 ದಿನಗಳ ನಂತರವೂ ದೋಷಾರೋಪ ಪಟ್ಟಿ ಸಲ್ಲಿಸಿರಲಿಲ್ಲ.