ಬೆಂಗಳೂರು: ಕಿಡ್ನಿ ದಾನ ಮಾಡಿದರೆ 4 ಕೋಟಿ ರೂಪಾಯಿ ನೀಡುವುದಾಗಿ ಜಾಹೀರಾತು ಪ್ರಕಟಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕೆಮರೂನ್ ದೇಶದ ಪ್ರಜೆಯನ್ನು ಸಿಸಿಬಿ ಅರೆಸ್ಟ್ ಮಾಡಿದೆ.
ಕೆಮರೂನ್ ದೇಶದ ಪ್ರಜೆ ತ಼ ಬ್ವೆರ್ಕಾ ಜಪ಼ ಡೆಕ್ಲನ್ ಬಂಧಿತ ಆರೋಪಿ. ಈತ ಹಲವು ವರ್ಷಗಳ ಹಿಂದೆ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದು ನಗರದ ಫರಾನ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಎರಡು ಸೆಮಿಸ್ಟರ್ ಫೇಲ್ ಆಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ್ದ. ತದನಂತರ ವೆಬ್ ಡಿಸೈನ್ ಕೋರ್ಸ್ ಮಾಡಿದ್ದಾನೆ. ಸುಲಭವಾಗಿ ಹಣ ಸಂಪಾದನೆ ಮಾಡಲು ಅಕ್ರಮ ದಾರಿ ತುಳಿದಿದ್ದ ಆರೋಪಿ ಸೇಲ್ ಯುವರ್ ಕಿಡ್ನಿ.ಇನ್ ಎಂಬ ವೆಬ್‌ಸೈಟ್ ತೆರೆದು ಕಿಡ್ನಿ ಮಾರಾಟ ಮಾಡಿದರೆ ನಾಲ್ಕು ಕೋಟಿ ರೂಪಾಯಿ ನೀಡಲಾಗುವುದು ಎಂದು ಜಾಹೀರಾತು ಪ್ರಕಟಿಸಿದ್ದಾನೆ.

ನಂತರ ಜನರನ್ನು ನಂಬಿಸಲು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರ ಫೊಟೋ ಅಪ್‌ಲೋಡ್ ಮಾಡಿದ್ದ. ಕಿಡ್ನಿ ದಾನ ಮಾಡಿದವರಿಗೆ ಮುಂಗಡವಾಗಿ 2 ಕೋಟಿ, ಸರ್ಜರಿ ಬಳಿಕ 2 ಕೋಟಿ ರೂಪಾಯಿ ನೀಡುವುದಾಗಿ ಆಫರ್ ಮಾಡಿದ್ದಾನೆ. ನಾಲ್ಕು ಕೋಟಿ ಆಸೆಗೆ ಬಿದ್ದ ಅಮಾಯಕರು ಆರೋಪಿಯ ವೆಬ್ಸೈಟ್ಗೆ ಎಡತಾಕಿದ್ದಾರೆ. ಅಲ್ಲಿಂದ ನಂಬರ್ ತೆಗೆದುಕೊಂಡು ವಾಟ್ಸಪ್ ಮೂಲಕ ಚಾಟ್ ಮೂಲಕ ಸಂಪರ್ಕಿಸುತ್ತಿದ್ದ ಜನರಿಗೆ ಮೊದಲು ರಕ್ತ ಪರೀಕ್ಷೆ, ಪ್ರವೇಶ ಶುಲ್ಕ ಎಂದು ಹೇಳಿ ಮುಂಗಡವಾಗಿ 15 ಸಾವಿರ ರೂ. ಹಣ ಪಾವತಿ ಮಾಡಿಸಿಕೊಳ್ಳುತ್ತಿದ್ದ.
ತನ್ನ ಮೇಲೆ ಅನುಮಾನಬಾರದಿರಲು ಮಿಜೋರಾಂನ ಮೂಲದ ಮತ್ತೊಬ್ಬ ಆರೋಪಿಯ ಬ್ಯಾಂಕ್ ಖಾತೆಗೆ ಹಣ ಪಾವತಿಸುವಂತೆ ಹೇಳುತ್ತಿದ್ದ. ಖಾತೆಗೆ ಹಣ ಬೀಳುತ್ತಿದ್ದಂತೆ ಶೇ.20 ಹಣ ತನ್ನಲ್ಲಿಟ್ಟುಕೊಂಡು ಉಳಿದ ಹಣವನ್ನು ವಿದೇಶಿ ಪ್ರಜೆ ಕೆಮರೂನ್ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುತ್ತಿದ್ದಾನೆ.
ಹೈಬ್ರಿಡ್ ಹಸು ಮಾರಾಟ ಹೆಸರಿನಲ್ಲಿಯೂ ಮೋಸ:
ಬಂಧಿತನಿಂದ ಲಾಪ್ ಟ್ಯಾಪ್, ಪೆನ್ ಡ್ರೈ ಹಾಗೂ ಎಟಿಎಂ ಕಾರ್ಡ್ ಮೊಬೈಲ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರಿಗೆ ಆರೋಪಿಯ ಮತ್ತೊಂದು ದಂಧೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಹೋಪ್ ಡೈರಿ ಫಾರ್ಮ್ ಲಿ.ವೆಬ್ ಕ್ರಿಯೆಟ್ ಮಾಡಿಕೊಂಡಿದ್ದ ಆತ, ಗಿರ್, ಹೆಚ್‌ಎಫ್ ಸೇರಿ ಹಲವು ತಳಿ ರಾಸುಗಳು ಕಡಿಮೆ ಬೆಲೆಗೆ ಮಾರಾಟಕ್ಕಿದೆ ಪ್ರಚಾರ ಮಾಡಿದ್ದಾನೆ. ಬೇರೆ ಬೇರೆ ರಾಜ್ಯದ ರಾಸುಗಳು ಕೊಂಡುಕೊಳ್ಳುವ ಗ್ರಾಹಕರಿಗೆ ಸ್ಟೇಟ್ ಟ್ರಾನ್‌ಫರ್, ಇನ್ಶೂರೆನ್ಸ್ ಮತ್ತು ವೆಟನರಿ ಸ್ಟೇಟ್ ಕ್ಲಿಯರೆನ್ಸ್ ಎಂದು ಹೇಳಿ 30ರಿಂದ 40 ಸಾವಿರ ರೂ. ಹಣ ವಸೂಲಿ ಮಾಡುತ್ತಿದ್ದರು.

ಈತನ ವಿರುದ್ದ ರಾಮನಗರ ಹಾಗೂ ನಗರದ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಮೋಸಗೊಳಗಾದವರು ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.