ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಹಾಗೂ ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೊಡಿಯೇರಿ ಅವರ ವಿರುದ್ಧ ಜಾರಿ ನಿರ್ದೇಶನಾಲಯದ ಪ್ರಕ್ರಿಯೆಗೆ ಹೈಕೋರ್ಟ್ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿನೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿತು. ಆರೋಪ ನಿಗದಿ ಮಾಡುವ ಪ್ರಕ್ರಿಯೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆಗಸ್ಟ್ 18ರಂದು ನಿಗದಿಯಾಗಿದ್ದು, ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಎನ್‌ಡಿಪಿಸಿ ಕಾಯಿದೆಯಡಿ ಬಿನೇಶ್ ವಿಧೇಯ ಅಪರಾಧದ (ವಿಸ್ತೃತದ ಅಪರಾಧದ ಭಾಗ) ಆರೋಪಿಯಲ್ಲ. ಈಚೆಗೆ ವಿಜಯ್ ಮದನ್‌ಲಾಲ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ಮುಂದುವರಿಸಲಾಗದು ಎಂದು ವಾದ ಮಂಡಿಸಿದರು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಪಿಎಎಂಎಲ್‌ಯು ವಿಧೇಯ ಅಪರಾಧದಲ್ಲಿ ಆರೋಪಿಯಾಗಿರುವವರನ್ನು ಮಾತ್ರವಲ್ಲ, ಅದಕ್ಕೆ ಸಾಥ್ ನೀಡಿದವರನ್ನೂ ಶಿಕ್ಷೆಗೆ ಗುರಿಪಡಿಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ: ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್) ಆರೋಪ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2020ರ ಅಕ್ಟೋಬರ್ 29ರಂದು ಬಿನೇಶ್ ಅವರನ್ನು ಬಂಧಿಸಲಾಗಿತ್ತು. 2021ರ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಬಿನೇಶ್‌ಗೆ ಜಾಮೀನು ಮಂಜೂರು ಮಾಡಿತ್ತು. ತಮ್ಮ ವಿರುದ್ಧ ಇಡಿ ನಡೆಸುತ್ತಿದ್ದ ತನಿಖಾ ಪ್ರಕ್ರಿಯೆ ರದ್ದು ಕೋರಿ ಬಿನೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಮೇಲೆ ಹಿಂಸಾತ್ಮಕ ಕೃತ್ಯ ಎಸಗಿರುವುದು ದೌರ್ಜನ್ಯವಲ್ಲದೆ ಮತ್ತೇನು?: ಬೇಸರ ವ್ಯಕ್ತಪಡಿಸಿದ ಸುಪ್ರೀಂ