ಬೆಂಗಳೂರು : ನ್ಯಾಯಾಲಯದ ಆದೇಶದ ನಂತರವೂ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಕೃತ್ತು ಕಸಿ ಶಸ್ತ್ರ ಚಿಕಿತ್ಸಾ ಘಟಕ ಆರಂಭಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಅಂಡ್ ಲಿವರ್ ಪ್ಲಾಂಟೇಶನ್ ಘಟಕವನ್ನು ಸರ್ಕಾರ ಆರಂಭಿಸಿರಲಿಲ್ಲ. ಈ ಹಿನ್ನೆಲೆ ನಗರದ ವಕೀಲ ಎಂ ಎನ್ ಉಮೇಶ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಯಕೃತ್ತು ಕಸಿ ಶಸ್ತ್ರ ಚಿಕಿತ್ಸಾ ಘಟಕ ಆರಂಭಿಸಲು ಕಾಲಾವಕಾಶ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ನ್ಯಾಯಾಲಯಕ್ಕೆ ಘಟಕ ಆರಂಭಿಸುವ ಕುರಿತು ಭರವಸೆ ನೀಡಿ ತಿಂಗಳುಗಳೇ ಕಳೆದಿವೆ.
ಬಡ ರೋಗಿಗಳ ಜತೆ ಚೆಲ್ಲಾಟವಾಡುತ್ತಿದ್ದೀರಾ?. ಘಟಕ ಆರಂಭಿಸಲು ಮತ್ತೆಷ್ಟು ದಿನ ಬೇಕು?. ಸರ್ಕಾರ ಕಾರ್ಯ ನಿರ್ವಹಿಸುವ ರೀತಿ ಇದೇನಾ?. ಇದೇ ರೀತಿ ನಡೆದುಕೊಂಡರೆ ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿತು.
ಜತೆಗೆ ಮುಂದಿನ ವಿಚಾರಣೆ ವೇಳೆ ವೈದ್ಯಕೀಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.
ಬಡ ರೋಗಿಗಳಿಗೆ ಅನುಕೂಲವಾಗುವಂತೆ ಲಿವರ್ ಪ್ಲಾಂಟೇಶನ್ ಸರ್ಜರಿ ಘಟಕ ಆರಂಭಿಸುವಂತೆ ಕೋರಿ ವಕೀಲ ಎಂ. ಎನ್ ಉಮೇಶ್ ಕಳೆದ 2020ರ ಮಾರ್ಚ್‌ನಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ಗೆ ಸರ್ಕಾರ ತಕ್ಷಣವೇ ಘಟಕ ಆರಂಭಿಸುವುದಾಗಿ ಭರವಸೆ ನೀಡಿತ್ತು.
ಅದರಂತೆ ಅರ್ಜಿ ಇತ್ಯರ್ಥಪಡಿಸಿದ್ದ ನ್ಯಾಯಾಲಯ ಲಿವರ್ ಪ್ಲಾಂಟೇಶನ್ ಸರ್ಜರಿ ಘಟಕ ಸ್ಥಾಪಿಸಲು ಸೂಚಿಸಿತ್ತು. ಆದರೆ, ಸರ್ಕಾರ ನಿಗದಿತ ಅವಧಿಯಲ್ಲಿ ಘಟಕ ಆರಂಭಿಸದ ಹಿನ್ನೆಲೆ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ.
ಓದಿ: ಕುಂಚಿಟಿಗ ಸಮುದಾಯ OBC ಪಟ್ಟಿಗೆ ಕೋರಿ ಅರ್ಜಿ : ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್