ಬೆಂಗಳೂರು: ಪತ್ನಿಯ ಕೊಲೆ ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ನಿರ್ಧಾರ ಪ್ರಶ್ನಿಸಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ಎಸ್.ವಿ.ರಮೇಶ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಘಟನೆ ನಡೆದ ಮನೆಯಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು ಸಂಭವಿಸಿದೆ ಮತ್ತು ಚಾರ್ಜ್ಶೀಟ್ ಪ್ರಕಾರ, ಆರೋಪಿಯು ಮೃತರನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸಿರುವ ಅಂಶ ಗೊತ್ತಾಗಿದೆ. ದೂರು ಪರಿಶೀಲಿಸಿದಾಗ ಮೃತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆರೋಪಿಗಳು ದೂರುದಾರರಿಗೆ ಮಾಹಿತಿ ನೀಡಿಲ್ಲ. ಮರಣೋತ್ತರ ವರದಿಯ ಪ್ರಕಾರ, ಮೃತದೇಹದ ಮೇಲೆ ಕೆಲವು ಬಾಹ್ಯ ಗಾಯಗಳು, ಆಂತರಿಕ ರಕ್ತಸ್ರಾವ ಕಂಡುಬಂದಿದೆ. ಡೆತ್ ನೋಟ್ನ ನಿಖರತೆಯನ್ನು ಈ ಹಂತದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಪ್ರಾಸಿಕ್ಯೂಷನ್ ಸಂಗ್ರಹಿಸಿದ ವಸ್ತುಗಳಿಂದ, ಮೇಲ್ಮನವಿದಾರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾದ ಅಪರಾಧಗಳಿಗಾಗಿ ಮೇಲ್ನೋಟಕ್ಕೆ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ಜಾಮೀನು ನೀಡಿದಲ್ಲಿ ಸಾಕ್ಷ್ಯವನ್ನು ತಿರುಚುವ ಎಲ್ಲಾ ಸಾಧ್ಯತೆಗಳಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಅಲ್ಲದೆ, ವಿಚಾರಣಾ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದಾರೆ. ಆದ್ದರಿಂದ ಪ್ರಕರಣದಲ್ಲಿ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರ ತಾಲೂಕಿನವರಾದ ರಮೇಶ್, ವಿ.ಶಿಲ್ಪಾ ಅವರನ್ನು ಬಿಇ ವ್ಯಾಸಂಗ ಮಾಡುತ್ತಿದ್ದಾಗ ಪ್ರೀತಿಸಿ ಮದುವೆಯಾಗಿದ್ದರು. ಶಿಲ್ಪಾ ಬೇರೆ ಜಾತಿಗೆ ಸೇರಿದ್ದವರಾದ್ದರಿಂದ ರಮೇಶ್ ಕುಟುಂಬಸ್ಥರು ವಿವಾಹಕ್ಕೆ ವಿರೋಧಿಸಿದ್ದರು. ಆದರೂ ವಿವಾಹವಾಗಿದ್ದ ಅರ್ಜಿದಾರರು ಚಿಂತಾಮಣಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋದಣಿಯನ್ನೂ ಮಾಡಿಸಿದ್ದರು. ಇದಾದ ಬಳಿಕ ಶಿಲ್ಪಾಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುವುದಕ್ಕೆ ಪ್ರಾರಂಭಿಸಿದ್ದರು. ಈ ನಡುವೆ 2 ಜೂನ್ 2023 ರಂದು, ಶಿಲ್ಪಾ ಅವರ ತಂದೆ ವೆಂಕಟರಾಯಪ್ಪ ಅವರು ತಮ್ಮ ಮಗಳಿಗೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಮರುದಿನ ಬೆಳಿಗ್ಗೆ ತನ್ನ ಮಗಳನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮನೆಯ ಮಾಲೀಕರಿಂದ ಮಾಹಿತಿ ಪಡೆದರು. ತಕ್ಷಣವೇ ದೂರುದಾರರು ಆಸ್ಪತ್ರೆಗೆ ತೆರಳಿದಾಗ ಶಿಲ್ಪಾ ಮೃತಪಟ್ಟಿದರು. ಘಟನೆ ನಂತರ ಶಿಲ್ಪಾರ ತಂದೆ, ರಮೇಶ್ ಮತ್ತವರ ಸಹೋದರ ಹಾಗೂ ಮನೆಯ ಮಾಲೀಕರ ವಿರುದ್ಧ 498ಎ ಸೇರಿದಂತೆ ವಿವಿಧ ಐಪಿಸಿ ಪ್ರಕರಣಗಳಡಿ ಎಫ್‌ಐಆರ್ ದಾಖಲಿಸಿದ್ದರು. ನಂತರ ಇವರು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಉದ್ಯಮಿಯಿಂದ ಜಪ್ತಿ ಹಣ ದೋಚಲು ಮುಂದಾದ ಪ್ರಕರಣ : 2ನೇ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು