ಬೆಂಗಳೂರು : ಪ್ರಕರಣ ದಾಖಲಿಸುವ ವೇಳೆ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ ಎಂಬ ಹಿನ್ನೆಲೆ ಹೈಕೋರ್ಟ್ 12 ಮಂದಿ ವಿರುದ್ಧ ದಾಖಲಿಸಿದ್ದ ಗ್ಯಾಂಬ್ಲಿಂಗ್ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ನಗರದ ಶೇಷಾದ್ರಿಪುರಂ ಠಾಣೆ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79, 80ರ ಅಡಿಯಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದಪಡಿಸುವಂತೆ ಕೋರಿ ಸ್ಟ್ರೈಕರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್ನ ಸಿಬ್ಬಂದಿ ಹಾಗೂ ಇತರೆ 7 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ಧ ಪೀಠ ಈ ಆದೇಶ ಹೊರಡಿಸಿದೆ.
ಪೀಠ ತನ್ನ ಆದೇಶದಲ್ಲಿ, ಪೊಲೀಸರು ಸ್ಟ್ರೈಕರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಜೂಜಾಟದ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕ ನಂತರ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಕ್ಲಬ್ ಮೇಲೆ ದಾಳಿ ನಡೆಸಿ ರೂ.12,800 ನಗದು, ವಿವಿಧ ಬಣ್ಣಗಳ 120 ಟೋಕನ್‌ಗಳು, 6x4 ಡಾರ್ಟ್ ಗೇಮ್ ಬೋರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗೆಯೇ, ಸ್ಥಳದಲ್ಲಿದ್ದ 7 ವ್ಯಕ್ತಿಗಳು ಹಾಗೂ 5 ಮಂದಿ ಕ್ಲಬ್ ಸಿಬ್ಬಂದಿ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 79 ಮತ್ತು 80ರ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಆದರೆ, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿರುವ ಮ್ಯಾಜಿಸ್ಟ್ರೇಟ್ ಆದೇಶದ ಪ್ರತಿ ಇಲ್ಲ. 2020ರ ಮಾರ್ಚ್ 12ರಂದು ದಾಳಿ ನಡೆಸಿರುವ ಪೊಲೀಸರು ಎಫ್‌ಐಆರ್ ಅನ್ನು ಮಾರ್ಚ್ 13ರಂದು ದಾಖಲಿಸಿದ್ದಾರೆ.
ಅದೇ ದಿನ ಬೆಳಗ್ಗೆ 11 ಗಂಟೆಗೆ ಮ್ಯಾಜಿಸ್ಟ್ರೇಟ್‌ಗೆ ತಲುಪಿಸಲಾಗಿದೆ. ಹೀಗಾಗಿ, ಮಾರ್ಚ್ 12ರಂದು ಪೊಲೀಸರು ಅನುಮತಿ ಕೇಳಿರಬಹುದು. ಆದರೆ, ಅದನ್ನು ಎಫ್‌ಐಆರ್ ಮತ್ತು ತನಿಖಾಧಿಕಾರಿಯ ಹೇಳಿಕೆಯೊಂದಿಗೆ ಸಲ್ಲಿಸಬೇಕಾಗಿತ್ತು.
ಆದರೆ, ಈ ಸಂಬಂಧ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಸೂಕ್ತ ರೀತಿಯಲ್ಲಿ ಪ್ರಕರಣವನ್ನು ದಾಖಲಿಸಿಲ್ಲ ಎಂಬ ಹಿನ್ನೆಲೆಯಲ್ಲಿ 12 ಜನರ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.