ಬೆಂಗಳೂರು: ಸಹೋದ್ಯೋಗಿ ಕಿರಿಯ ವಕೀಲರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ, ಬೆಂಗಳೂರಿನ ವಕೀಲ ಹೆಚ್ ಮಂಜುನಾಥ್ ಅವರನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ವೃತ್ತಿ ಮಾಡದಂತೆ ನಿರ್ಬಂಧಿಸಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆಎಸ್‌ಬಿಸಿ) ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಾದ ಆಲಿಸದೇ ವಕೀಲಕೆ ವೃತ್ತಿ ಮುಂದುವರೆಸದಂತೆ ನಿರ್ಬಂಧ ವಿಧಿಸಿದ್ದ ಕೆಎಸ್‌ಬಿಸಿ ಆದೇಶವನ್ನು ಪ್ರಶ್ನಿಸಿ ವಕೀಲ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರಾದ ವಕೀಲ ಮಂಜುನಾಥ್, ಜನವರಿ 10ರೊಳಗೆ ಆರೋಪ ಸಂಬಂಧ ತಮ್ಮ ಆಕ್ಷೇಪಣೆ ಸಲ್ಲಿಸಬೇಕು. ಇದನ್ನು ಕೆಎಸ್‌ಬಿಸಿ ಪರಿಗಣಿಸಬೇಕು. ಕೆಸ್‌ಬಿಸಿ ಮಾಡಿರುವ ಆದೇಶವು ಅರ್ಜಿದಾರರಿಗೆ ಸಿವಿಲ್ ಮತ್ತು ವೃತ್ತಿಪರವಾಗಿ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಮಂಜುನಾಥ್ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಅವುಗಳ ಪರಿಣಾಮ ಭಯಾನಕವಾಗಿರಲಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರಿಗೆ ಜನವರಿ 10ರೊಳಗೆ ಆಕ್ಷೇಪಣೆ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ ಎಂದು ನ್ಯಾಯಾಪೀಠ ತಿಳಿಸಿದೆ.
ವಿಚಾರಣೆ ವೇಳೆ ವಕೀಲ ಮಂಜುನಾಥ್ ವಾದ ಮಂಡಿಸಿ, ಆಕ್ಷೇಪಣೆ ಸಲ್ಲಿಸಲು ತಮ್ಮಿಂದ ವಿಳಂಬವಾಗಿದೆ. ನನ್ನನ್ನು ಅಮಾನತು ಮಾಡದೇ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕಿತ್ತು. ತಮ್ಮ ವಿರುದ್ಧದ ದೂರನ್ನು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ (ನಿಷೇಧ ಮತ್ತು ಪರಿಹಾರ) ಕಾಯಿದೆ ಅಡಿ ಸ್ಥಾಪಿಸಲಾಗಿರುವ ಸಮಿತಿಯ ಮುಂದೆ ಇರಿಸಬೇಕಿತ್ತು. ಹೀಗಾಗಿ, ದೂರು ಊರ್ಜಿತವಾಗುವುದಿಲ್ಲ ಎಂದು ವಾದ ಮಂಡಿಸಿದ್ದರು. ಕೆಎಸ್‌ಬಿಸಿ ಪರ ವಕೀಲರು, ಮಂಜುನಾಥ್ ಅವರಿಗೆ ಸೂಕ್ತ ಕಾಲಾವಕಾಶ ನೀಡಿದ್ದರೂ ಅವರು ಕಾಲಮಿತಿಯಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲ. ಆದ್ದರಿಂದ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದರು.
ಏನಿದು ಪ್ರಕರಣ?: ವಕೀಲೆಯೊಬ್ಬರ ದೂರಿಗೆ ವಿವರಣೆ ಕೇಳಿ ವಕೀಲ ಹೆಚ್ ಮಂಜುನಾಥ್ಗೆ ಕೆಎಸ್‌ಬಿಸಿ ನೋಟಿಸ್ ಜಾರಿಗೊಳಿಸಿತ್ತು. 2023ರ ಅಕ್ಟೋಬರ್ 5ರಂದು ಕೆಎಸ್‌ಬಿಸಿಗೆ ಪತ್ರ ಸಲ್ಲಿಸಿದ ಅವರು, ತಮ್ಮ ವಿವರಣೆ ಸಲ್ಲಿಸಲು 10 ರಿಂದ 14 ದಿನಗಳ ಅವಕಾಶ ನೀಡಲು ಕೋರಿದ್ದರು. ಅದಾದ 30 ದಿನ ಕಳೆದರೂ ವಿವರಣೆ ಅಥವಾ ಆಕ್ಷೇಪಣೆ ಸಲ್ಲಿಸಲು ಮಂಜುನಾಥ್ ವಿಫಲವಾಗಿದ್ದರು. ಹೀಗಾಗಿ, ಕೆಎಸ್‌ಬಿಸಿ ಶಿಸ್ತು ಪ್ರಾಧಿಕಾರದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು. ದೂರುದಾರೆ ಮತ್ತು ವಕೀಲ ಹೆಚ್ ಮಂಜುನಾಥ್ ನಡುವಿನ ವಾಟ್ಸ್ಆ್ಯಪ್ ಸಂದೇಶಗಳನ್ನು ಪರಿಶೀಲಿಸಿದಾಗ, ಮಂಜನಾಥ್ ಅವರು ಕಿರಿಯ ವಕೀಲೆಯಾಗಿದ್ದ ದೂರುದಾರೆಗೆ ಲೈಂಗಿಕ ಕಿರುಕುಳ ನೀಡಿರುವುದು, ಜೀವ ಬೆದರಿಕೆ ಹಾಕಿರುವುದು ಮತ್ತು ವೃತ್ತಿಪರತೆಗೆ ಹೊರತಾಗಿ ತಪ್ಪಾಗಿ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಅವರ ಸನ್ನದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ ಆದೇಶಸಲಾಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಕೊರತೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್