ಬೆಂಗಳೂರು: ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಮಂಡಳಿಯ ಕಾರ್ಯವೈಖರಿಯನ್ನು ಹಿರಿಯ ಐಎಎಸ್ ಅಧಿಕಾರಿಯಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿಸಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಪೀಠ, ಜಲ, ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪ್ರಾದೇಶಿಕ ಅಧಿಕಾರಿಗಳಿಗೆ ಅಧಿಕಾರ ನೀಡಿ, ಕೇಂದ್ರ ಸರ್ಕಾರ 1987ರಲ್ಲಿ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಮಂಡಳಿಗೆ ಈ ಆದೇಶದ ಬಗ್ಗೆಯೇ ಮಾಹಿತಿಯಿಲ್ಲ. ಇದನ್ನು ನೋಡಿದರೆ ಮಂಡಳಿ ಕಾರ್ಯನಿರ್ವಹಣೆ ಮಾಡುತ್ತಿರುವ ಕುರಿತು ಅನುಮಾನ ಮೂಡುತ್ತದೆ ಎಂದಿದೆ.
ಮಂಡಳಿಯ ಅಧಿಕಾರಿಗಳಿಗೆ ಅವರ ಅಧಿಕಾರ ವ್ಯಾಪ್ತಿಯ ಅರಿವಿದ್ದಂತೆ ಇಲ್ಲ. ಮಂಡಳಿ ಸರಿಯಾದ ಕ್ರಮಗಳನ್ನು ಜರುಗಿಸುತ್ತಿಲ್ಲ ಆದ್ದರಿಂದಲೇ ಪ್ರಕರಣಗಳಲ್ಲಿ ತಪ್ಪಿತಸ್ಥರು ಖುಲಾಸೆ ಆಗುತ್ತಿದ್ದಾರೆ. ಯಾರಿಗೂ ಶಿಕ್ಷೆ ಆಗುತ್ತಿಲ್ಲ. ಹಾಗೆಯೇ, ಮಾಲಿನ್ಯ ನಿಯಂತ್ರಿಸುವಲ್ಲಿ ಮಂಡಳಿ ವಿಫಲವಾಗಿರುವುದು ಹಲವು ಪ್ರಕರಣಗಳಲ್ಲಿ ವ್ಯಕ್ತವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವೈಖರಿಯ ಕುರಿತು ಹಿರಿಯ ಐಎಎಸ್ ಅಧಿಕಾರಿಯಿಂದ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪ್ರಸ್ತಾಪಿಸಿದ ಪೀಠ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯಿಲ್ಲದೇ ಕ್ವಾರಿ, ಹೊಂಡಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇಂತಹ ಅವೈಜ್ಞಾನಿಕ ಕ್ರಮವನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ಪಾಲಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿತು. ಅಲ್ಲದೇ, ತ್ಯಾಜ್ಯ ವಿಲೇವಾರಿಗೆ ಯೋಜನೆ ರೂಪಿಸಿದ್ದೀರಾ ಎಂದು ಪ್ರಶ್ನಿಸಿದ ಪೀಠ, 2016ರ ಘನ ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಸೂಚಿಸಿತು. ನಿಯಮಗಳನ್ನು ಜಾರಿ ಮಾಡುವ ಕುರಿತು ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿ ಆಡಳಿತಾಧಿಕಾರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.