ಬೆಂಗಳೂರು: ಐತಿಹಾಸಿಕ ಹಿನ್ನೆಲೆ ಇರುವ ಕಲಬುರಗಿ ಕೋಟೆಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳನ್ನ 15 ದಿನಗಳಲ್ಲಿ ತೆರವು ಮಾಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗೆ ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಶರಣ್ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ಇಂದು ನಡೆಯಿತು.
ಅರ್ಜಿದಾರರ ಪರ ವಕೀಲರು ವಾದ ಮಾಡಿ ಕಲಬುರಗಿ ಕೋಟೆಯ ಒಳಗೆ ಮತ್ತು ಹೊರಗೆ 194 ಕುಟುಂಬಗಳು ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನೆಲೆಸಿವೆ. ಈ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸ್ಥಳೀಯ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಈ ವೇಳೆ ಕೇಂದ್ರ ಸರ್ಕಾರದ ಪರ ವಾದಿಸಿದ ಸಹಾಯಕ ಸಾಲಿಸಿಟರ್ ಜನರಲ್ ಸಿ.ಶಶಿಕಾಂತ್ ಅವರು, ಒತ್ತುವರಿ ತೆರವುಗೊಳಿಸಲು ಸರ್ವೇಕ್ಷಣಾ ಮತ್ತು ಪುರಾತತ್ವ ಇಲಾಖೆಗೆ ಈಗಾಗಲೇ ನೋಟಿಸ್ ನೀಡಿದೆ. ನೋಟಿಸ್ ಅನ್ವಯ 15 ದಿನಗಳಲ್ಲಿ ತೆರವುಗೊಳಿಸಬೇಕು ಎಂದು ತಿಳಿಸಿತ್ತು. ಆದರೆ ಇನ್ನು ತೆರವುಗೊಳಿಸಿಲ್ಲ ಎಂದು ವಿವರಿಸಿದರು.
ಇದನ್ನ ಆಲಿಸಿದ ನ್ಯಾಯಪೀಠ ತೆರವು ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.