ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಹಾಗೂ ಎಲ್ಪಿಜಿ ಸಂಪರ್ಕ ಹೊಂದಿಲ್ಲದ ಕುಟುಂಬಗಳಿಗೆ ತಿಂಗಳಿಗೆ ತಲಾ ಮೂರು ಲೀಟರ್ ಸೀಮೆ ಎಣ್ಣೆ ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ನಗರದ ವಕೀಲ ಎಸ್. ಚಂದ್ರಶೇಖರಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ 2016ರ ಜುಲೈ 27ರಂದು ಹೊರಡಿಸಿರುವ ಅಧಿಸೂಚನೆಯಂತೆ ಎಲ್ಪಿಜಿ ಸಂಪರ್ಕ ಹೊಂದಿಲ್ಲದ ಬಿಪಿಎಲ್ ಕಾರ್ಡುದಾರ ಕುಟುಂಬಗಳಿಗೆ ತಿಂಗಳಿಗೆ ಮೂರು ಲೀಟರ್ ಸೀಮೆಎಣ್ಣೆ ಒದಗಿಸಬೇಕು ಎಂದು ಆದೇಶಿಸಿದೆ.
ಅರ್ಜಿದಾರರು, ರಾಜ್ಯದಲ್ಲಿ ಎಲ್ಪಿಜಿ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗದಂತಹ ಕಡು ಬಡವರಿಗೆ ಸೀಮೆಎಣ್ಣೆ ಪೂರೈಸಲು ಸರ್ಕಾರಕ್ಕೆ ಸೂಚಿಸಬೇಕು. ಅದಕ್ಕಾಗಿ ರಾಜ್ಯಕ್ಕೆ ಅಗತ್ಯವಿರುವ 39 ಸಾವಿರ ಲೀಟರ್ ಸೀಮೆಎಣ್ಣೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯಕ್ಕೆ ಪೂರೈಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.