ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಮುಂದಿನ ಆರು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಅವಧಿ ಮುಗಿದಿರುವ ಪಾಲಿಕೆಗೆ ಚುನಾವಣೆ ನಡೆಸುವಂತೆ ಕೋರಿ ಕಾಂಗ್ರೆಸ್ ಪಕ್ಷದ ಪಾಲಿಕೆ ಮಾಜಿ ಸದಸ್ಯ ಎಂ. ಶಿವರಾಜು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ನವೆಂಬರ್ 25ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನ ಆದೇಶ ಪ್ರಕಟಿಸಿದ ಪೀಠ, ಪಾಲಿಕೆಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಈಗಾಗಲೇ ವಾರ್ಡ್ ವಿಂಗಡನೆ ಪೂರ್ಣಗೊಂಡಿರುವುದರಿಂದ ಸರ್ಕಾರ ಮೀಸಲು ಅಧಿಸೂಚನೆ ಹೊರಡಿಸಿದ 6 ವಾರಗಳಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸಬೇಕು ಎಂದು ಆದೇಶಿಸಿದೆ. ಹಾಗೆಯೇ ರಾಜ್ಯ ಸರ್ಕಾರ ಚುನಾವಣೆಗೆ ಅಗತ್ಯವಿರುವ ಹಣಕಾಸು ನೆರವು ಒದಗಿಸಬೇಕು ಎಂದು ನಿರ್ದೇಶಿಸಿದೆ. ಅದರಂತೆ 2020ರ ಜೂನ್ 23 ರಂದು ಹೊರಡಿಸಿರುವ ವಾರ್ಡ್ ವಿಂಗಡಣೆ ಅಧಿಸೂಚನೆ ಆಧಾರದಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಮತದಾರರ ಪಟ್ಟಿ ಪ್ರಕಟಿಸಿದ ಪಾಲಿಕೆ
ಪೀಠ ತನ್ನ ತೀರ್ಪಿನಲ್ಲಿ, ರಾಜ್ಯ ಸರ್ಕಾರ ಪಾಲಿಕೆಯನ್ನು ಈಗಿರುವ 198 ವಾರ್ಡ್ಗಳಿಂದ 243 ವಾರ್ಡ್ ಗಳಿಗೆ ಹೆಚ್ಚಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸರಿ ಇದೆಯಾದರೂ, ಅದು ಈ ಚುನಾವಣೆಗೆ ಅನ್ವಯಿಸುವುದಿಲ್ಲ. ಚುನಾವಣೆಗೆ ಸಿದ್ದತೆಗಳನ್ನು ಆರಂಭಿಸಿದ ಬಳಿಕ ಸರ್ಕಾರ ಕಾಯ್ದೆಗೆ ತಂದಿರುವ ತಿದ್ದುಪಡಿ ತಂದಿದೆ. ಹೀಗಾಗಿ ಹೊಸ ಕಾಯ್ದೆಯು ಈ ಚುನಾವಣೆಗೆ ಅನ್ವಯಿಸುವುದಿಲ್ಲ ಹಾಗೂ ಅದರ ಆಧಾರದಲ್ಲಿ ಚುನಾವಣೆ ಮುಂದೂಡಲು ಬರುವುದಿಲ್ಲ. ಆದ್ದರಿಂದ ಪಾಲಿಕೆಗೆ ಸಂವಿಧಾನದ ವಿಧಿ 243(ಯು) ಪ್ರಕಾರ ಚುನಾವಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲರಾದ ಪ್ರೊ, ರವಿವರ್ಮ ಕುಮಾರ್ ಹಾಗೂ ಆಯೋಗದ ಪರ ಹಿರಿಯ ವಕೀಲ ಕೆ.ಎನ್ ಫಣೀಂದ್ರ ಅವರು, ಸರ್ಕಾರ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ಪಾಲಿಕೆಯ ವಾರ್ಡ್ ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ. ಹಾಗೆಯೇ, ಪಾಲಿಕೆ ಅವಧಿ ಮುಗಿಯುವ ಮುನ್ನವೇ ಆಡಳಿತಾಧಿಕಾರಿ ನೇಮಕ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಲು ಪ್ರತಿಬಾರಿ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುತ್ತಿರುವ ಸರ್ಕಾರದ ಈ ಕ್ರಮ ಖಂಡನೀಯ ಎಂದಿದ್ದರು. ಅಲ್ಲದೇ, ಸರ್ಕಾರದ ಕ್ರಮವನ್ನು ಒಪ್ಪಿದರೆ ಪಾಲಿಕೆಗೆ ನಡೆಯಬೇಕಿರುವ ಚುನಾವಣೆ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂದಕ್ಕೆ ಹೋಗಲಿದೆ ಎಂದು ವಿವರಿಸಿದ್ದರು.
ಸರ್ಕಾರದ ಪರ ವಾದಿಸಿದ್ದ ಅಡ್ವೊಕೇಟ್ ಜನರಲ್, ಸರ್ಕಾರಕ್ಕೆ ಚುನಾವಣೆ ಮುಂದೂಡುವ ಉದ್ದೇಶವಿಲ್ಲ. ಬೃಹದಾಕಾರವಾಗಿ ಬೆಳೆದಿರುವ ಪಾಲಿಕೆಯನ್ನು ಮರು ವಿಂಗಡಿಸಿ, ವಾರ್ಡ್ ಗಳನ್ನು ಹೆಚ್ಚಿಸುವ ಅಗತ್ಯವಿದೆ. ಅದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವಾರ್ಡ್ ವಿಂಗಡಣೆ ಪೂರ್ಣಗೊಳಿಸಿ ಶೀಘ್ರವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದರು.