ಬೆಂಗಳೂರು: ಆಶ್ರಮದ ಭಕ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮೀಜಿಗೆ ನೀಡಿರುವ ಜಾಮೀನು ರದ್ದು ಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ನಿತ್ಯಾನಂದ ಸ್ವಾಮೀಜಿಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದು ಕೋರಿ ಸ್ವಾಮೀಜಿಯ ಮಾಜಿ ಕಾರು ಚಾಲಕ ಹಾಗೂ ದೂರುದಾರ ಲೆನಿನ್ ಕುರುಪ್ಪನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರಕರಣದ ವಿಚಾರಣೆಗೆ ಸ್ವಾಮೀಜಿ ಸತತವಾಗಿ ಗೈರು ಹಾಜರಾಗುತ್ತಿರುವುದೇಕೆ? ಎಂದು ಪ್ರಶ್ನಿಸಿತು. ಬಳಿಕ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಮನಗರದ ಮೂರನೇ ಹೆಚ್ಚುವರಿ ನ್ಯಾಯಾಲಯಕ್ಕೆ ಕೆಲವೊಂದು ಸೂಚನೆಗಳನ್ನು ನೀಡಿತು.
ಆರೋಪಿ ಸ್ವಾಮೀಜಿ ಈವರೆಗೆ ವಿಚಾರಣೆಗೇಕೆ ಹಾಜರಾಗಿಲ್ಲ ಎಂಬ ಬಗ್ಗೆ ಹಾಗೂ ಪ್ರಕರಣದ ವಿಚಾರಣೆಯಲ್ಲಿ ಆಗಿರುವ ಪ್ರಗತಿಯ ಮಾಹಿತಿಯನ್ನು ಮುಂದಿನ ವಿಚಾರಣೆವೊಳಗೆ ಪೀಠಕ್ಕೆ ಸಲ್ಲಿಸಬೇಕು ಎಂದು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಚಿಸಿತು.
ಆಶ್ರಮದ ಭಕ್ತೆ ಮೇಲೆ ಅತ್ಯಾಚಾರವೆಸಗಿತ ಆರೋಪಿ ನಿತ್ಯಾನಂದ ಸ್ವಾಮೀಜಿ ಅವಧಿ ಮುಗಿದ ಪಾಸ್‌ಪೋರ್ಟ್ ಬಳಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈವರೆಗೆ ಪ್ರಕರಣದ ವಿಚಾರಣೆಗೆ ಹಾಜರಾಗಿಲ್ಲ. ದೇಶದಲ್ಲಿ ಇರುವುದಾಗಿ ತಿಳಿಸಿ ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದಾರೆ. ಆದರೆ ಕಳೆದ ಒಂದೂವರೆ ವರ್ಷದ ಹಿಂದೆಯೇ ದೇಶ ಬಿಟ್ಟು ಹೋಗುವ ಮೂಲಕ ಷರತ್ತು ಉಲ್ಲಂಘಿಸಿದ್ದಾರೆ. ಹೀಗಾಗಿ ನಿತ್ಯಾನಂದ ಸ್ವಾಮೀಜಿಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಲೆನಿನ್ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.