ಬೆಂಗಳೂರು: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಏಪ್ರಿಲ್ 1ರೊಳಗೆ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಹರಪನಹಳ್ಳಿಯ ‘ಡಾ.ಬಿ.ಆರ್. ಅಂಬೇಡ್ಕರ್ ಯುವ ಸಂಘಟನೆ’ ಅಧ್ಯಕ್ಷ ರೇವಣ ಸಿದ್ದಪ್ಪಗೆ ಹೈಕೋರ್ಟ್ ತಾಕೀತು ಮಾಡಿದೆ.
ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದನ್ನು ಆಕ್ಷೇಪಿಸಿ ಒ. ನೀಲಪ್ಪ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಏ.1ರೊಳಗೆ ಪ್ರತಿಮೆಯನ್ನು ಸ್ಥಳಾಂತರಿಸಬೇಕು ಎಂದು ರೇವಣ ಸಿದ್ದಪ್ಪಗೆ ನಿರ್ದೇಶಿಸಿರುವ ಪೀಠ, ತಪ್ಪಿದರೆ ನಿಮ್ಮ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದೆ.
ಹಿಂದಿನ ವಿಚಾರಣೆ ಸಂದರ್ಭಗಳಲ್ಲಿ ಅನಧಿಕೃತವಾಗ ಸ್ಥಾಪಿಸಿರುವ ಪ್ರತಿಮೆಯನ್ನು ಸ್ಥಳಾಂತರಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅಲ್ಲದೇ, ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಅನಧಿಕೃತವಾಗಿ ಸ್ಥಾಪಿಸುವುದು ಅವರಿಗೆ ಮಾಡುವ ಅಪಮಾನ ಎಂದಿತ್ತು. ಬಳಿಕ, ಪ್ರತಿಮೆ ಸ್ಥಳಾಂತರಿಸುವುದಾಗಿ ಸಂಘದ ಮುಖ್ಯಸ್ಥ ಪ್ರಮಾಣಪತ್ರ ಸಲ್ಲಿಸಿದ ನಂತರವೂ ಪ್ರತಿಮೆ ಸ್ಥಳಾಂತರಿಸದೇ ಇರುವುದು ಹೈಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಯಸ್ಸು 81, 66 ಆದ್ರೂ ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದ್ರು.. ವಿಜಯಪುರದಲ್ಲಿ ವೃದ್ಧರಿಬ್ಬರ ದಾಖಲೆ!