ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಭದ್ರತಾ ಆಯೋಗಕ್ಕೆ (ಎಸ್‌ಎಸ್‌ಸಿ) ಸದಸ್ಯರನ್ನು ನೇಮಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿ ಐಜಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ:
2006ರ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ಪ್ರಕಾಶ್ ಸಿಂಗ್ ವರ್ಸಸ್ ಕೇಂದ್ರ ಸರ್ಕಾರ ನಡುವಿನ ಪ್ರಕರಣದಲ್ಲಿ 2006ರ ಡಿ.1ರೊಳಗೆ ದೇಶದ ಎಲ್ಲ ರಾಜ್ಯಗಳು ರಾಜ್ಯ ಭದ್ರತಾ ಸಮಿತಿ ರಚಿಸಬೇಕು ಎಂದು ಆದೇಶಿಸಿತ್ತು. ಪೊಲೀಸ್ ಇಲಾಖೆ ಮೇಲೆ ರಾಜ್ಯ ಸರ್ಕಾರ ಅನಗತ್ಯ ಪ್ರಭಾವ ಮತ್ತು ಒತ್ತಡ ಹೇರುವುದನ್ನು ತಡೆಯಲು ಸಮಿತಿ ರಚಿಸುವುದು ಅಗತ್ಯವೆಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ಸುಪ್ರಿಂಕೋರ್ಟ್ ಆದೇಶ ಮಾಡಿದ 6 ವರ್ಷಗಳ ನಂತರ ರಾಜ್ಯ ಸರ್ಕಾರ 2012ರಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಎಸ್ಎಸ್ಸಿಯನ್ನು ರಚನೆ ಮಾಡಿದೆ. ಆದರೆ, ಸಮಿತಿ ರಚಿಸಿ 9 ವರ್ಷ ಕಳೆದಿದ್ದರೂ ಅದಕ್ಕೆ ಸದಸ್ಯರನ್ನೇ ನೇಮಕ ಮಾಡಿಲ್ಲ. ಇದರಿಂದಾಗಿ ಸಮಿತಿಯು ಕಾರ್ಯಾರಂಭಿಸಲು ಮತ್ತು ಸಭೆ ನಡೆಸಲು ಸಾಧ್ಯವಾಗಿಲ್ಲ.
ಇದರಿಂದ ಸುಪ್ರೀಂಕೋರ್ಟ್ ಆದೇಶವು ಪಾಲನೆಯಾಗದೆ ಉಳಿದಿದೆ. ಆದ್ದರಿಂದ ಸಮಿತಿಗೆ ಎಲ್ಲ ಸದಸ್ಯರನ್ನು ನೇಮಕ ಮಾಡಲು ಮತ್ತು ಸಮಿತಿಯು ಕಾರ್ಯ ನಿರ್ವಹಣೆ ಆರಂಭಿಸಲು ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.