ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಭೂ ಭರ್ತಿ ಘಟಕದಿಂದ ಉಂಟಾಗಿರುವ ಅನಾಹುತಗಳಿಗೆ ಪರಿಹಾರ ನೀಡಲು ನಿರ್ದೇಶಿಸಬೇಕು ಹಾಗೂ ಪರಿಸ್ಥಿತಿ ಅಧ್ಯಯನ ಮಾಡಿ, ವರದಿ ಸಲ್ಲಿಸಲು ತಜ್ಞರನ್ನು ನೇಮಕ ಮಾಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ ಅರ್ಜಿ ಸಂಬಂಧ ರಾಜ್ಯ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಚಿವಾಲಯಗಳು, ಮಂಗಳೂರು ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟಂಬರ್ 16ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದಿಸಿದ ವಕೀಲ ಶ್ರೀಧರ ಪ್ರಭು, ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶಗಳಲ್ಲಿ ಕಸ ಸುರಿದು ಭೂ ಭರ್ತಿ ಮಾಡಿದ ಪರಿಣಾಮ ಸುತ್ತಲಿನ ಐದಾರು ಕಿ.ಮೀ ಜನ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ತೀವ್ರ ಮಳೆಯಿಂದಾಗಿ ಕಸದ ರಾಶಿ ಕುಸಿದು ಹಲವು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಕಲುಷಿತ ನೀರು ಪಕ್ಕದ ನದಿಗೆ ಹರಿದು ಹೋಗುತ್ತಿದೆ. ಸರ್ಕಾರ ಘೋಷಿಸಿದ 22 ಕೋಟಿ ರೂಪಾಯಿ ಪರಿಹಾರ ಇನ್ನೂ ಸಂತ್ರಸ್ತ ಕುಟುಂಬಗಳಿಗೆ ಸಿಕ್ಕಿಲ್ಲ. ತುಳು ಭಾಷೆಯಲ್ಲಿ ರಾಮಾಯಣ ಬರೆದ ಮಂದಾರ ಕೇಶವ ಭಟ್ಟ ಅವರ ಮನೆ ಸಹ ಕಸದ ರಾಶಿಯಲ್ಲಿ ಮುಳುಗಿ ಹೋಗಿದೆ ಎಂದು ವಿವರಿಸಿದರು.
ಅಲ್ಲದೇ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಪರಿಸರ ಸಂರಕ್ಷಣೆ ಕಾಯ್ದೆ-1986, ಘನತ್ಯಾಜ್ಯ ನಿರ್ವಹಣಾ ನಿಯಮ-2016, ಘನತ್ಯಾಜ್ಯ ನಿರ್ವಹಣಾ ಮಾದರಿ ಬೈ-ಲಾ-2019 ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ತಾಜ್ಯ ಕುಸಿದಿರುವ ಘಟನೆಯನ್ನು ವಿಪತ್ತು ಎಂದು ಘೋಷಿಸಿ, ತಕ್ಷಣವೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಮತ್ತು ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ದುರ್ಘಟನೆ ಕುರಿತಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಜಿಲ್ಲಾ ನ್ಯಾಯಾಧೀಶರು ಅಥವಾ ಪ್ರತಿಷ್ಠಿತ ಸಂಸ್ಥೆಯನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.