ಬೆಂಗಳೂರು: ಪೋಷಕರು ಮಾಡಿರುವ ತಪ್ಪಿಗೆ ಮಗು ತೊಂದರೆ ಅನುಭವಿಸುವಂತಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಹೆಸರನ್ನು ಸೇರಿಸಿ ವಿತರಣೆ ಮಾಡಲು ನಿರ್ದೇಶನ ನೀಡಿದೆ. ಕಾರಣಾಂತರಗಳಿಂದ ಹೆಸರನ್ನು ಉಲ್ಲೇಖಿಸದ ಹಿನ್ನೆಲೆಯಲ್ಲಿ ಹೆಸರನ್ನು ಉಲ್ಲೇಖಿಸಿ ಜನನ ಪ್ರಮಾಣ ಪತ್ರ ವಿತರಣೆ ಮಾಡುವಂತೆ ಸೂಚನೆ ನೀಡಲು ಕೋರಿ ಬೆಂಗಳೂರಿನಲ್ಲಿ ಜನಿಸಿದ್ದ ಕೇರಳದ ಫಾತೀಮಾ ರಿಚೆಲ್ಲೀ ಮ್ಯಾಥರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಈ ಸೂಚನೆ ನೀಡಿದೆ.
ಅಲ್ಲದೇ, ಅರ್ಜಿದಾರರಿಗೆ ಸರ್ಕಾರದಿಂದ ನೀಡಿರುವ ಆಧಾರ್, ಪಾಸ್‌ಪೋರ್ಟ್, ಸಿಬಿಎಸ್ಸಿ ನೀಡಿರುವ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಪೋಷಕರ ಹೆಸರಿದೆ. ಮಗುವಿನ ಗುರುತು ಮತ್ತು ಪಿತೃತ್ವದಲ್ಲಿ ಯಾವುದೇ ಪ್ರಶ್ನೆ ಉದ್ಭವಿಸಿಲ್ಲ. ಹೀಗಿರುವಾಗಿ ಮಗುವಿನ ಹೆಸರಿನೊಂದಿಗೆ ಜನನ ಪ್ರಮಾಣ ಪತ್ರವನ್ನು ನಿರಾಕರಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಷ್ಟೇ ಅಲ್ಲದೇ, ಜನನ ಪ್ರಮಾಣ ಪತ್ರದ ಕುರಿತ ಗೃಹ ಸಚಿವಾಲಯದ ನಿಯಮಗಳು ಸರ್ಕಾರದ ಪ್ರಾಧಿಕಾರಗಳಿಗೆ ಮಾತ್ರ ಗೊತ್ತಿರಲಿದೆ. ಆದ ಕಾರಣ ಕೇಂದ್ರದ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸುವುದು, ಸರ್ಕಾರದ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ಈ ಬಗ್ಗೆ ಅರ್ಜಿದಾರರ ಗಮನಕ್ಕೆ ತಂದಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಹೀಗಾಗಿ ರಾಜ್ಯದ ಹೊರ ಭಾಗದಲ್ಲಿ ನೆಲೆಸಿರುವ ಅರ್ಜಿದಾರರ ಗಮನಕ್ಕೂ ಬಂದಿಲ್ಲ.
15 ವರ್ಷದ ಮಗು ಅಪ್ರಾಪ್ತರಾಗಿರುತ್ತಾರೆ. ಹೀಗಾಗಿ ಪ್ರಾಪ್ತರಾದ ಬಳಿಕ ಹೆಸರನ್ನು ಸೇರ್ಪಡೆ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ. ಈ ರೀತಿಯ ಅಂಶಗಳನ್ನು ಸರ್ಕಾರದ ಪ್ರಾಧಿಕಾರಗಳು ಗಣನೆಗೆ ತೆಗೆದುಕೊಳ್ಳಬೇಕು. ಈ ಅಂಶವನ್ನು ಪರಿಗಣಿಸದೆ ಜನನ ಪ್ರಮಾಣ ಪತ್ರವನ್ನು ಹೆಸರು ಸೇರಿಸಿ ನೀಡದೆ ನಿರಾಕರಿಸಿರುವುದು ಕೆಟ್ಟ ಬೆಳವಣಿಗೆಯಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ: ಸ್ಪೈನ್ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿರುವ ಅರ್ಜಿದಾರರು 2000ನೇ ಇಸವಿಯ ಏಪ್ರಿಲ್ 28 ರಂದು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಜನಿಸಿದ್ದರು. ಆದರೆ, ಜನನ ಪ್ರಮಾಣ ಪತ್ರದಲ್ಲಿ ಪೋಷಕರ ಹೆಸರಿದ್ದು, ಅರ್ಜಿದಾರರ ಹೆಸರು ಉಲ್ಲೇಖಿಸಿರಲಿಲ್ಲ.ಆದರೆ, ಇತ್ತೀಚೆಗೆ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದ ಸಂದರ್ಭದಲ್ಲಿ ಜನ್ಮಸ್ಥಳ ಧೃಢೀಕರಣ ಪ್ರಮಾಣ ಪತ್ರ ಬೇಕಾಗಿದೆ. ಹೀಗಾಗಿ ತನ್ನ ಹೆಸರನ್ನು ಜನನ ಪ್ರಮಾಣ ಪತ್ರದಲ್ಲಿ ಸೇರಿಸಿ ವಿತರಣೆ ಮಾಡುವಂತೆ ಕೋರಿ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ತಿರಸ್ಕರಿಸಿದ್ದ ಬಿಬಿಎಂಪಿ, ಕೇಂದ್ರ ಗೃಹ ಸಚಿವಾಲಯ ಸೂಚನೆಯಂತೆ 15 ವರ್ಷದ ಅವಧಿಯಲ್ಲಿ ಜನನ ಪ್ರಮಾಣ ಪತ್ರದಲ್ಲಿ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಅರ್ಜಿದಾರರ ವಿಷಯದಲ್ಲಿ ಈ ಸಮಯ 2015ಕ್ಕೆ ಪೂರ್ಣಗೊಂಡಿದೆ. ಆದಾಗ್ಯೂ 5 ವರ್ಷಗಳ ಹೆಚ್ಚುವರಿ ಕಾಲಾವಕಾಶವಿದ್ದು, ಇದೂ ಸಹಾ 2020ಕ್ಕೆ ಅಂತ್ಯಗೊಂಡಿದೆ.
ಅಲ್ಲದೇ, ಕರ್ನಾಟಕ ರಾಜ್ಯ ಜನನ ಮರಣ ನೊಂದಣಿ ನಿಯಮ 1999ರ ನಿಯಮ 10 ರ ಪ್ರಕಾರ ಯಾವುದೇ ಮಗು ಎಲ್ಲಿ ಜನನವಾಗುತ್ತದೋ ಅಲ್ಲಿಯೇ ಮಗು ಹೆಸರು ಇಲ್ಲದೆಯೂ ಜನನ ಪ್ರಮಾಣ ಪತ್ರ ನೋಂದಣಿ ಮಾಡಬೇಕಾಗುತ್ತದೆ. ಇದಾದ ಬಳಿಕ ಪೋಕರು 12 ತಿಂಗಳಲ್ಲಿ ಹೆಸರನ್ನು ಲಿಖಿತ ಇಲ್ಲವೇ ಮೌಖಿಕವಾಗಿ ತಿಳಿಸಿ ಜನನ ಪ್ರಮಾಣ ಪತ್ರದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು.
ನಿಯಮ 10(1)ರ ಪ್ರಕಾರ 12 ತಿಂಗಳ ಮುಗಿದ ಬಳಿ 15 ವರ್ಷಗಳ ವರೆಗೂ ಹೆಸರು ಸೇರ್ಪಡೆಗೆ ಅವಕಾಶವಿರಲಿದೆ ಎಂಬುದಾಗಿ ನಿಯಮಗಳಲ್ಲಿದೆ. ಈ ಕಾಲಾವಧಿ ಮುಕ್ತಾಯವಾಗಿದೆ. ಹೀಗಾಗಿ ಜನನ ಪ್ರಮಾಣ ಪತ್ರದಲ್ಲಿ ಹೆಸರನ್ನು ಸೇರ್ಪಡೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: 53 ವರ್ಷಗಳ ನಂತರ ಮಗಳ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ನಟ ನಾಸಿರುದ್ದೀನ್ ಶಾ