ಬೆಂಗಳೂರು: ನಗರದ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಸದ್ಯದ ಮಾಲಿನ್ಯ ಪ್ರಮಾಣ ಎಷ್ಟಿದೆ ಎಂಬುದಕ್ಕೆ ಸಂಬಂಧಿಸಿದ ವರದಿ ನೀಡುವಂತೆ ಹೈಕೋರ್ಟ್ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.
ಈ ಕುರಿತು ನಗರದ ವಕೀಲೆ ಗೀತಾ ಮಿಶ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕೆಎಸ್‌ಪಿಸಿಬಿ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ ಬೆಳ್ಳಂದೂರು ವರ್ತೂರು ಕೆರೆಗಳ ಮತ್ತು ವೃಷಭಾವತಿ ನದಿ ಜಲಾನಯನ ಪ್ರದೇಶದ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ನಿರ್ದೇಶನದ ಪ್ರಕಾರ, ಕೆರೆಗಳಿಗೆ ತ್ಯಾಜ್ಯ ನೀರು ಸೇರಿದಂತೆ ಮತ್ತು ಜಲಾನಯನ ಪ್ರದೇಶ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಲಾಕ್ಡೌನ್‌ನಿಂದಾಗಿ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಕೆರೆಗಳ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೆರೆಗಳು ಮತ್ತು ನದಿಯ ಮಾಲಿನ್ಯ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು ಇವುಗಳ ಸಂರಕ್ಷಣೆಗೆ ಮುಂದಿನ ದಿನಗಳಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಕೆಎಸ್‌ಪಿಸಿಬಿಗೆ ಸೂಚಿಸಿತು. ಇದೇ ವೇಳೆ ಕೆರೆಗಳ ಬಫರ್ ಝೋನ್ ನಲ್ಲಿ ಬಿಡಿಎ ರಸ್ತೆ ನಿರ್ಮಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲ ಮೋಹನ್ ತಿಳಿಸಿ, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಲ್ಲಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ಇದಕ್ಕೆ ಸಂಬಂಧಿಸಿದ ದಾಖಲೆ ಮತ್ತು ವಿವರಗಳನ್ನು ಸಲ್ಲಿಸುವಂತೆ ಬಿಡಿಎಗೆ ಸೂಚಿಸಿತು.