ಬೆಂಗಳೂರು: ಆರ್.ಟಿ. ನಗರದ ರವೀಂದ್ರನಾಥ್ ಟ್ಯಾಗೋರ್ ಉದ್ಯಾನದಲ್ಲಿ ಬಿಬಿಎಂಪಿ ನಿರ್ಮಾಣ ಮಾಡುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಪಾರ್ಕ್ ಒಳಗೆ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸ್ಥಳೀಯ ನಿವಾಸಿ ಎಸ್. ಆರ್. ವಾರಂಬಳ್ಳಿ ಮತ್ತು ಸಿ. ಪ್ರಭು ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ, ಬಿಬಿಎಂಪಿ ಆಯುಕ್ತರು, ಮುಖ್ಯ ಇಂಜಿನಿಯರ್, ಜಯಮಹಲ್ ವಲಯದ ಸಹಾಯಕ ಇಂಜಿನಿಯರ್ ಮತ್ತು ಬಿಡಿಎ ಕಾರ್ಯಕಾರಿ ಇಂಜಿನಿಯರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಜಿ. ಆರ್. ಮೋಹನ್ ವಾದ ಮಂಡಿಸಿ ಆರ್ ಟಿ ನಗರದ ಎರಡನೇ ಹಂತ ದಲ್ಲಿ ರವೀಂದ್ರನಾಥ್ ಟ್ಯಾಗೋರ್ ಉದ್ಯಾನವಿದೆ. ಇದರಲ್ಲಿ ಬಿಬಿಎಂಪಿ ಸ್ಥಳೀಯರ ವಿರೋಧದ ನಡುವೆಯೂ ಮೂರು ಮಹಡಿಯ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುತ್ತಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಸೆಪ್ಟೆಂಬರ್ ಮೊದಲ ವಾರದಿಂದ ಪುನರ್ ಆರಂಭಿಸಲಾಗಿದೆ. ಪಾರ್ಕ್ ಒಳಗೆ ಮಕ್ಕಳು ಆಡುತ್ತಿದ್ದ ಸ್ಥಳದಲ್ಲಿ ಗುಂಡಿ ತೆಗೆದು ಹಾಳು ಮಾಡಲಾಗಿದೆ ಎಂದು ಆರೋಪಿಸಿದರು.
ಅಲ್ಲದೇ ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಕರ್ನಾಟಕ ಉದ್ಯಾನ ಆಟದ ಮೈದಾನ ಮತ್ತು ಮುಕ್ತ ಪ್ರದೇಶ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಗೆ ವಿರುದ್ಧವಾಗಿದೆ. ಈ ಉದ್ಯಾನದಿಂದ ಕೇವಲ ಐವತ್ತು ಮೀಟರ್ ದೂರದಲ್ಲಿ ಅಂಗನವಾಡಿ ಕೇಂದ್ರ ಇದೆ. ಹಾಗಿದ್ದೂ ಉದ್ಯಾನ ಕೆಡಿಸಿ ಮತ್ತೊಂದು ಅಂಗನವಾಡಿ ಕೇಂದ್ರ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಮಕ್ಕಳು ಆಟವಾಡಲು ಹಾಗೂ ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರಲು ಜಾಗ ಇಲ್ಲದಂತಾಗುತ್ತದೆ. ಹೀಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ತಡೆಯಬೇಕು. ಉದ್ಯಾನವನವನ್ನು ಮೊದಲಿನ ಸ್ಥಿತಿಗೆ ತರಲು ಬಿಬಿಎಂಪಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.