ಬೆಂಗಳೂರು : ಶುಲ್ಕ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ ಶಾಲೆಗಳು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೇ.70ಕ್ಕಿಂತ ಹೆಚ್ಚು ಬೋಧನಾ ಶುಲ್ಕ ಸಂಗ್ರಹಿಸಬಾರದು ಎಂದು ರಾಜ್ಯ ಸರ್ಕಾರ 2021ರ ಜ.29ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಅಸೋಯೇಷನ್ ಆಫ್ ಇಂಡಿಯನ್ ಸ್ಕೂಲ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ಇದೇ ವೇಳೆ ಶುಲ್ಕ ಸಂಗ್ರಹಿಸುವ ವಿಚಾರವಾಗಿ ಶಾಲೆಗಳು ಕೂಡ ತಮ್ಮ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಸ್ಪಷ್ಟಪಡಿಸಿದೆ. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ
ಪ್ರಸಕ್ತ ಸಾಲಿನ ಬೋಧನಾ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸಿ ಸರ್ಕಾರ 2021ರ ಜ.29ರಂದು ಆದೇಶ ಹೊರಡಿಸಿದೆ. ಅದರಂತೆ ಶೇ.70ರಷ್ಟು ಬೋಧನಾ ಶುಲ್ಕ ಬಿಟ್ಟು ಇತರೆ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಸೇರಿ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೆ ಸೂಚಿಸಿದೆ. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳು ಸಾಕಷ್ಟು ನಷ್ಟ ಅನುಭವಿಸಿವೆ.
ಈ ಸಂದರ್ಭದಲ್ಲಿ ಬೋಧನಾ ಶುಲ್ಕವನ್ನು ಶೇ.30ರಷ್ಟು ಕಡಿತಗೊಳಿಸಿದ ಪರಿಣಾಮ ಶುಲ್ಕ ಸಂಗ್ರಹ ಪ್ರಮಾಣ ಕಡಿಮೆಯಾಗಲಿದ್ದು, ಸಿಬ್ಬಂದಿಗೆ ವೇತನ ಪಾವತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರ್ಕಾರ ಜ.29ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರ ಶಿಕ್ಷಣ ಸಂಸ್ಥೆಗಳು ಕೋರಿವೆ.