ಬೆಂಗಳೂರು : ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಅಥವಾ ಬಾಲಕಿ ಗರ್ಭ ಧರಿಸಿದ ಸಂದರ್ಭದಲ್ಲಿ ಆ ಗರ್ಭ ಮುಂದುವರಿಕೆಗೆ ಅಥವಾ ಗರ್ಭಪಾತ ಮಾಡಿಸುವ ವಿಚಾರದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿ ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಪ್ರೋಕ್ಸೋ ಪ್ರಕರಣದ ಸಂತ್ರಸ್ತೆಯಾದ ನನ್ನ 17 ವರ್ಷದ ಪುತ್ರಿ ಗರ್ಭವನ್ನು ಧರಿಸಿದ್ದು, ಆ ಗರ್ಭವನ್ನು ತೆಗೆಯಲು ವೈದ್ಯರಿಗೆ ನಿರ್ದೇಶಿಸುಂತೆ ಕೋರಿ ವ್ಯಕ್ತಿಯೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರ ಪುತ್ರಿಯ 24 ವಾರಗಳ ಭ್ರೂಣವನ್ನು ತೆಗೆಯುವಂತೆ ನಗರದ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದೆ.
ನಿರ್ದೇಶನಗಳೇನು..?: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ ತನಿಖಾಧಿಕಾರಿಗಳು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಆ ಮೂಲಕ ಆಕೆಯ ಗಭಿರ್ಣಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಆಕೆಯ ಗರ್ಭವು ಎಷ್ಟು ತಿಂಗಳಿನದ್ದು ಎಂಬುದು ತಿಳಿಯುತ್ತದೆ. ಆಕೆಯ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿ ತಿಳಿಯುತ್ತದೆ. ಆಕೆಯ ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗಬಹುದೇ ಅಥವಾ ಇಲ್ಲವೇ ಎಂದು ತಿಳಿಯಲಿದೆ.
- ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಎಂಬುದು ತಿಳಿದರೆ ಆ ಕುರಿತು ಪ್ರಕರಣದ ತನಿಖಾಧಿಕಾರಿಯು ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ರಕ್ಷಣಾ ಘಟಕಕ್ಕೆ ವಿಷಯ ತಿಳಿಸಬೇಕು.
- ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ರಕ್ಷಣಾ ಘಟಕದ ಸಮಾಲೋಚಕರು ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಬೇಕು.
- ಸಮಾಲೋಚಕರು ಗರ್ಭವನ್ನು ಮುಂದುವರಿಸುವ ಮತ್ತು ಗರ್ಭಪಾತ ಮಾಡಿಸುವ ಕುರಿತಂತೆ ಇರುವ ಕಾನೂನಾತ್ಮಕ ಅವವಕಾಶಗಳ ಬಗ್ಗೆ ಸಂತ್ರಸ್ತೆ ಮತ್ತವರ ಕುಟುಂಬವರಿಗೆ ಅರಿವು ಮೂಡಿಸಬೇಕು. ಅದೂ ಸಹ ಅವರಿಗೆ ತಿಳಿದಿರುವ ಭಾಷೆಯಲ್ಲಿ. ಅಗ್ಯವಿದ್ದರೆ ಅನುವಾದಕರನ್ನು ಬಳಸಬೇಕು.
- ಸಂತ್ರಸ್ತೆ ಮತ್ತು ಕುಟುಂಬದವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅವರಿಗೆ ತಿಳಿದ ಭಾಷೆಯಲ್ಲಿ ಉತ್ತರಿಸಬೇಕು. ಆ ಮೂಲಕ ಸಂವಹನ ಕೊರತೆಯಾಗದಂತೆ ನೋಡಿಕೊಳ್ಳಬೇಕು.
- ಒಂದೊಮ್ಮೆ ವೈದ್ಯಕೀಯ ಗರ್ಭಪಾತ ನಡೆಸಿದರೆ, ಭ್ರೂಣದ ಮಾದರಿಯನ್ನು ಡಿಎನ್‌ಎ ವಿಶ್ಲೇಷಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು. ಸಾಧ್ಯವಾದರೆ ಹೆಚ್ಚುವರಿ ಮಾದರಿಗಳನ್ನು ಪರಿಶೀಲನೆಗಾಗಿ ಸಂಗ್ರಹ ಮಾಡಿಟ್ಟುಕೊಳ್ಳಬೇಕು.
- ಸಂತ್ರಸ್ತೆಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ ತಿಳಿಯಲು ಕಾಲಕಾಲಕ್ಕೆ ತಪಾಸಣೆ ನಡೆಸಬೇಕು.
- ಸಂತ್ರಸ್ತೆಯು ಗರ್ಭವನ್ನು ಮುಂದುವರಿಸುವ ಅಥವಾ ಗರ್ಭಪಾತ ಮಾಡಿಸುವ ವಿಚಾರದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿ ರಚಿಸಬೇಕು.
- ರಾಜ್ಯ ಸರ್ಕಾರಕ್ಕೆ ನೇಮಿಸಿದ ತಜ್ಞರ ಸಮಿತಿಯು ವಿಸ್ತೃತ ಮಾರ್ಗಸೂಚಿಗಳು. ಮಾರ್ಗಸೂಚಿ ರಚಿಸಿದ ಅವುಗಳನ್ನು ಎಲ್ಲಾ ತನಿಖಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಮತ್ತು ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ರಾಜ್ಯ ಡಿಜಿಪಿ ಮತ್ತು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕಳುಹಿಸಿಕೊಡಬೇಕು.
- ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ತುರ್ತು ಅಗತ್ಯತೆಯನ್ನು ಪರಿಗಣಿಸಿ ಕಾನೂನು ಸೇವೆಗಳ ಪ್ರಾಧಿಕಾರವು ಪರಿಹಾರ ಬಿಡುಗಡೆ ಮಾಡಬೇಕು.
ಓದಿ: ಮಗು ಹೊಂದಲು ತೊಡಕಾಗುತ್ತಿದೆಯಾ ಪಿಸಿಒಎಸ್: ತಜ್ಞರು ಹೇಳುವುದೇನು?