ಬೆಂಗಳೂರು: ಚಿಕ್ಕಬಳ್ಳಾಪುರದ ಆವಲಗುರ್ಕಿ ಗ್ರಾಮದ ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ಹೈಕೋರ್ಟ್ ಮುಂದುವರೆಸಿದೆ. ಚಿಕ್ಕಬಳಾಪುರ ಕಸಬಾ ಹೋಬಳಿಯ ಚಂಬಳ್ಳಿಯ ನಿವಾಸಿ ಎಸ್.ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಈ ಹಿಂದೆ ನೀಡಲಾಗಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ತೆರವುಗೊಳಿಸುವಂತೆ ಈಶ ಪ್ರತಿಷ್ಟಾನದ ಪರ ವಕೀಲರು ಮನವಿ ಸಲ್ಲಿಸಿದ್ದರು. ಈ ಮನವಿ ಕುರಿತು ಪ್ರತಿಕ್ರಿಯಿಸಿರುವ ನ್ಯಾಯಪೀಠ, ಮಧ್ಯಂತರ ಆದೇಶ ನೀಡಿರುವ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಪೂರ್ವಾಗ್ರಹವನ್ನು ಹೊಂದಿಲ್ಲ. ಪರಿಸರ ಹಾಳಾಗದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬುದಾಗಿ ಯಥಾಸ್ಥಿತಿ ವಿಧಿಸಲಾಗಿದೆ. ಅದಕ್ಕೆ ಪ್ರತಿವಾದಿಗಳು ಭರವಸೆಯನ್ನೂ ನೀಡಿದ್ದಾರೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿತು. ಈ ವೇಳೆ ಮತ್ತೆ ವಾದ ಮುಂದುವರೆಸಿದ ವಕೀಲರು, ಮಂಗಳವಾರಕ್ಕೆ ವಿಚಾರಣೆ ನಿಗದಿ ಪಡಿಸುವಂತೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ನ್ಯಾಯಪೀಠ ಅರ್ಜಿದಾರರ ಇಚ್ಚೆಯಂತೆ ವಿಚಾರಣೆ ನಿಗದಿಪಡಿಸಲು ಸಾಧ್ಯವಿಲ್ಲ. ಎಲ್ಲ ಅರ್ಜಿದಾರರು ಇದೇ ರೀತಿ ಮನವಿ ಮಾಡಿದರೆ ಸಾಧ್ಯವೇ ಎಂದು ಪ್ರಶ್ನಿಸಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ಪರ ವಕೀಲರು ಹಾಜರಾಗಿ, ಪ್ರತಿಮೆ ಅನಾವರಣಗೊಳಿಸಿದ ದಿನದಂದು ಇಲ್ಲಿ ಬೆಂಕಿ ಹಾಕಲಾಗಿದೆ. ಪಟಾಕಿ ಸಿಡಿಸಲಾಗಿದೆ. ಇದರಿಂದ ಪರಿಸರಕ್ಕೆ ತೀವ್ರ ಹಾನಿಯಾಗಿದೆ ಎಂದು ವಿವರಿಸಿದರು. ಈ ಅಂಶವನ್ನು ಪರಿಗಣಿಸಿಯೇ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.
ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ, ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ನ್ಯಾಯಪೀಠ, ಈ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು. ಪ್ರತಿಮೆ ಕಾಮಗಾರಿ ನಡೆಸದಂತೆ, ಹಬ್ಬದ ಸಂದರ್ಭದಲ್ಲಿ ಲಕ್ಷಗಟ್ಟಲೆ ಜನ ಜಮಾಯಿಸುವುದನ್ನು ನಿರ್ಬಂಧಿಸಬೇಕು ಎಂಬುದಾಗಿ ನಿರ್ದೇಶನ ನೀಡಿತ್ತು. ಅಲ್ಲದೆ, ಪ್ರತಿವಾದಿಗಳಾದ ಕೇಂದ್ರ ಪರಿಸರ ಇಲಾಖೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿತ್ತು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಮಾಧ್ಯಮಗಳಲ್ಲಿ ಶಾಂತಿಯ ಅಭೂಷಣ್ ಎಂಬುದಾಗಿ ತೋರಿಸಿರುವ ಕುರಿತು ಪ್ರತಿಕ್ರಿಯಿಸಿದ ಪೀಠ, ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಗುಣಮಟ್ಟವನ್ನು ನ್ಯಾಯಪೀಠ ಪರಿಗಣಿಸುವುದಿಲ್ಲ. ಈ ಸಂಬಂಧ ಆಕ್ಷೇಪವಿದ್ದಲ್ಲಿ ಅಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದೆಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ರಾತ್ರೋರಾತ್ರಿ ಕೆ.ಎಚ್.ಪಾಟೀಲರ ಮೂರ್ತಿ ತೆರವು: ಕೈ ಮುಖಂಡರಿಂದ ಹೋರಾಟಕ್ಕೆ ನಿರ್ಧಾರ