ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನು ವೈದ್ಯಕೀಯ ವರದಿ ಆಧರಿಸಿ ತೀರ್ಮಾನಿಸುವುದಾಗಿ ಹೇಳಿರುವ ಹೈಕೋರ್ಟ್, ನಟಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ನಿರ್ದೇಶಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ನಟಿ ಸಂಜನಾ ಗಲ್ರಾನಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ. ನಟಿ ಆರೋಗ್ಯಕ್ಕೆ ಸಂಬಂಧಿಸಿದಂತೆ ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ವರದಿ ಪರಿಶೀಲಿಸಿದ ಬಳಿಕ ಜಾಮೀನು ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನ ಡಿ. 10ಕ್ಕೆ ಮುಂದೂಡಿದೆ.
ಓದಿ: ರೈತರು ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್ ಬೆಂಬಲ: ಡಿಕೆಶಿ
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ಈ ಮೊದಲು ಜಾಮೀನು ಕೋರಿ ನಗರದ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನಗರದ ವಿಶೇಷ ಕೋರ್ಟ್ ಸಂಜನಾ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 28ರಂದು ತಿರಸ್ಕರಿಸಿತ್ತು. ಬಳಿಕ ಹೈಕೋರ್ಟ್ ಕೂಡ ಅಕ್ಟೋಬರ್ನಲ್ಲಿ ಜಾಮೀನು ನಿರಾಕರಿಸಿತ್ತು.
ಇದೀಗ ಎರಡನೇ ಬಾರಿ ನವೆಂಬರ್ 17 ರಂದು ಅನಾರೋಗ್ಯದ ಕಾರಣ ನೀಡಿ ಜಾಮೀನು ಕೋರಿದ್ದಾರೆ. ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇದ್ದು, ಚಳಿಗಾಲದಲ್ಲಿ ಸಮಸ್ಯೆ ಉಲ್ಭಣಿಸಲಿದೆ. ಹಿಂದೊಮ್ಮೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ಜಾಮೀನು ನೀಡಬೇಕು ಎಂದು ನಟಿ ಪರ ವಕೀಲರು ಮನವಿ ಮಾಡಿದ್ದಾರೆ.