ಬೆಂಗಳೂರು: ಅಪ್ರಾಪ್ತ ಮಕ್ಕಳಿಗೆ ಪಾಸ್‌ಪೋರ್ಟ್ ನೀಡಲು ಇರುವ ಗೊಂದಲ ನಿವಾರಿಸಲು ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಕೋರ್ಟ್‌ಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣ ಬಾಕಿ ಇದ್ದರೆ ಅಂತಹ ಸಂದರ್ಭದಲ್ಲಿ ಅಪ್ರಾಪ್ತರಿಗೆ ಪಾಸ್‌ಪೋರ್ಟ್ ನೀಡಬೇಕೆಂದು ಪಾಸ್‌ಪೋರ್ಟ್ ಮ್ಯಾನುಯಲ್ 2020 ರಲ್ಲಿ ಸ್ಪಷ್ಟಪಡಿಸಲಾಗಿದೆ. ಇದನ್ನು ಪಾಲನೆ ಮಾಡುತ್ತಿಲ್ಲ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.
ಪಾಸ್‌ಪೋರ್ಟ್ ನಿಯಮಗಳಿಗೂ, ವಿವಾಹ ವಿಚ್ಛೇದನ ಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ನಡುವೆ ಕೆಲವು ವ್ಯತ್ಯಾಸಗಳಿವೆ. ಅವುಗಳನ್ನು ಸರಿಪಡಿಸಬೇಕಾಗಿದೆ. ಹಾಗಾಗಿ ತಿದ್ದುಪಡಿಗೆ ಇದು ಸಕಾಲ ಎಂದು ಕೋರ್ಟ್ ಹೇಳಿದೆ. ಪತಿ, ಪತ್ನಿ ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿದ್ದಾಗ ಓರ್ವ ಪೋಷಕರು ಅಪ್ರಾಪ್ತ ಮಗುವಿಗೆ ಪಾಸ್‌ಪೋರ್ಟ್ ಕೋರಿ ಅರ್ಜಿ ಸಲ್ಲಿಸಿದರೆ ಪೋಷಕರ ವಿಳಾಸ ಮತ್ತು ವಿವರಗಳನ್ನು ಆಧರಿಸಿ ಮಗುವಿಗೆ ಪಾಸ್‌ಪೋರ್ಟ್ ನೀಡಬೇಕೆಂದು ನ್ಯಾಯಪೀಠ ಹೇಳಿದೆ.
ಪಾಸ್‌ಪೋರ್ಟ್ ವಿತರಣೆಯಲ್ಲಿ ಅಧಿಕಾರಿಗಳು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕೋರ್ಟ್ ಗಮನಕ್ಕೂ ಬಂದಿದೆ. ಆದರೆ, ಪಾಸ್‌ಪೋರ್ಟ್ ನಿಯಮಕ್ಕೂ ಮತ್ತು ಮ್ಯಾನುಯಲ್‌ಗೂ ವ್ಯತ್ಯಾಸವಿದೆ. ಅಂತಹ ವೇಳೆ ಪಾಸ್‌ಪೋರ್ಟ್ ನೀಡಿಕೆ ಸುಗಮವಾಗಿ ಆಗುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ಮಾಡಬೇಕಿದೆ. ಆ ಮೂಲಕ ಅಪ್ರಾಪ್ತರಿಗೆ ಪಾಸ್‌ಪೋರ್ಟ್ ನೀಡಿಕೆಯಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ತಮ್ಮ ಅಪ್ರಾಪ್ತ ಮಗನನ್ನು ಸುಪರ್ದಿಗೆ ಪಡೆದಿರುವ ಅರ್ಜಿದಾರರು ಕ್ರಿಸ್ಮಸ್ ಆಚರಣೆಗೆ ಆಸ್ಟ್ರೇಲಿಯಾಕ್ಕೆ ತೆರಳಲು ಮಗನ ಪಾಸ್‌ಪೋರ್ಟ್ ನವೀಕರಣಕ್ಕಾಗಿ 2022ರ ಜು.2ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಗಂಡನಿಂದ ಬೇರ್ಪಟ್ಟಿರುವ ಕಾರಣ ಅವರು ಪತಿಯ ಸಹಿಯನ್ನು ಸಲ್ಲಿಸಲಾಗಿರಲಿಲ್ಲ. ಆದರೆ ಪಾಸ್‌ಪೋರ್ಟ್ ಅಧಿಕಾರಿಗಳು ಅದೇ ಕಾರಣಕ್ಕೆ ಮಗುವಿನ ಪಾಸ್‌ಪೋರ್ಟ್ ನವೀಕರಣ ಮಾಡಿರಲಿಲ್ಲ. ಇದನ್ನು ಅರ್ಜಿದಾರರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
(ಓದಿ: ಸಾಕ್ಷ್ಯಾಧಾರ ಕೊರತೆಯಿಂದ ಅತ್ಯಾಚಾರ ಕೇಸ್ ರದ್ದು.. ತನಿಖೆಯಲ್ಲಿನ ದೋಷ ಆರೋಪಿಗೆ ಲಾಭ: ಹೈಕೋರ್ಟ್)