ಬೆಂಗಳೂರು: ಹೇಮಾವತಿ ನದಿಯಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೆರೆಗಳಿಗೆ ನವೆಂಬರ್‌ನಿಂದ ಈವರೆಗೆ ಎಷ್ಟು ನೀರು ಹರಿಸಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು ವಾದಿಸಿ, ಶಿರಾ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಕೆರೆಗಳಿವೆ. ಆದರೆ, ಹೇಮಾವತಿ ನದಿಯಿಂದ ಬಿಡುಗಡೆ ಮಾಡಿದ ನೀರಿನಿಂದ ಕೇವಲ ಒಂದು ಕರೆ ತುಂಬಿದೆ. ಈಗ ಕೆರೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಕೃಷಿ ಕಾರ್ಯಗಳಿಗೆ ನೀರು ಬಿಡುಗಡೆಯಾಗಿಲ್ಲ. ಇದರಿಂದ ನೀರಾವರಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಮತ್ತೊಂದೆಡೆ ಕುಡಿಯವ ನೀರಿನ ಅಭಾವ ಕಾಡುತ್ತಿದೆ ಎಂದು ವಿವರಿಸಿದರು.ಅಲ್ಲದೆ, ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಶಿರಾ ತಾಲೂಕಿನ ಗ್ರಾಮಗಳಿಗೆ ನಿರಾವರಿ ಚಟುವಟಿಕೆಗಳಿಗೆ ಮತ್ತು ಕುಡಿಯುವುದಕ್ಕೆ ಸಮರ್ಪಕ ಪ್ರಮಾಣದಲ್ಲಿ ನೀರು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಪರಿಗಣಿಸಿದ ಪೀಠ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅರ್ಜಿದಾರರು ಕೋರಿದ್ದಾರೆ. ಕೃಷಿ ಚಟುವಟಿಕಗಳಿಗೆ ನೀರಿನ ಅಭಾವವಿದೆ ಎಂಬುದು ಅತ್ಯಂತ ಗಂಭೀರ ವಿಚಾರ. ಆದ್ದರಿಂದ, ಹೇಮಾವತಿ ನದಿಯಿಂದ ಶಿರಾ ತಾಲೂಕಿನ ಕೆರೆಗಳಿಗೆ ನವೆಂಬರ್‌ನಿಂದ ಎಷ್ಟು ನೀರು ಬಿಡುಗಡೆ ಮಾಡಲಾಗಿದೆ. ಸದ್ಯ ಏಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.