ಬೆಂಗಳೂರು: ರಾಜ್ಯದ ಎಲ್ಲಾ ಪೌರ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಕ್ಲಿಪ್ಟನ್ ರೊಜಾರಿಯೋ ವಾದಿಸಿ ರಾಜ್ಯದ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಿಗೆ ನಿಗದಿತವಾಗಿ ವೇತನ ಪಾವತಿಸುತ್ತಿಲ್ಲ ಎಂಬ ವಿಚಾರವನ್ನು ವಿವರಿಸಿದರು.
ಇದೇ ವೇಳೆ ಸರ್ಕಾರ ಸಲ್ಲಿಸಿದ ಲಿಖಿತ ಮಾಹಿತಿಯಲ್ಲಿ ರಾಜ್ಯದ 27 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಿಗೆ ವೇತನ ಬಾಕಿ ಇರುವುದನ್ನು ಪೀಠ ಗಮನಿಸಿತು. ಈ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಪೌರಕಾರ್ಮಿಕರ ವೇತನವನ್ನು ನಿಗದಿತ ಅವಧಿಯಲ್ಲಿ ಪಾವತಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು.
ಒಂದು ವೇಳೆ ನಗರ ಸ್ಥಳೀಯ ಸಂಸ್ಥೆಗಳು ವೇತನ ಪಾವತಿಸದಿದ್ದಲ್ಲಿ ಸರ್ಕಾರವೇ ಪಾವತಿಸಬೇಕು ಎಂದು ಆದೇಶಿಸಿತು. ಇನ್ನು ಕೋವಿಡ್ ಕರ್ತವ್ಯದ ವೇಳೆ ಮೃತಪಟ್ಟ 11 ಪೌರ ಕಾರ್ಮಿಕರ ಕುಟುಂಬದವರಿಗೆ ಸರ್ಕಾರ ತಲಾ 30 ಲಕ್ಷ ರೂ. ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿತು.