ಬೆಂಗಳೂರು: ಅನ್ಯ ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗಲು ಮುಂದಾದ ಕಾರಣ ಪಾಲಕರ ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎನ್ನಲಾದ ಯುವತಿಗೆ ಇದೀಗ ತನ್ನಿಷ್ಟವಾದ ಸ್ಥಳದಲ್ಲಿ ನೆಲೆಸುವುದಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಈ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಿಂದು ಯುವತಿಯೊಬ್ಬಳನ್ನು ಆಕೆಯ ಪಾಲಕರು ಅಕ್ರಮ ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಟಿ. ನರೇಂದ್ರ ಪ್ರಸಾದ್ ಮತ್ತು ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ, ಈ ಅವಕಾಶ ಕಲ್ಪಿಸಿದೆ.
ಇದೇ ಯುವತಿಗೆ ಸಂಬಂಧಿಸಿದಂತೆ 2023 ರ ಮೇ 11 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಯುವತಿಗೆ ಮೇ 16ರ ವರೆಗೆ ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿತ್ತು. ಮೇ 16 ರಂದು ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಯುವತಿ ಹಾಜರಾಗಿ, ತನಗೆ 24 ವರ್ಷವಾಗಿದೆ. ತಾನು ವಯಸ್ಕಳಾಗಿದ್ದು, ಕಚೇರಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದೇನೆ.
ನನಗೆ ಪಾಲಕರೊಂದಿಗೆ ಹೋಗಲು ಇಷ್ಟವಿಲ್ಲ. ಸದ್ಯ ತಂಗಿರುವ ಪುನರ್ವಸತಿ ಕೇಂದ್ರದಲ್ಲಿ ಉಳಿಯಲೂ ಇಚ್ಛೆಯಿಲ್ಲ. ಹೀಗಾಗಿ ಮುಕ್ತವಾಗಿರಲು ಬಯಸಿದ್ದು, ನಾನು ಇಷ್ಟಪಡುವ ಪಿಜಿಯಲ್ಲಿ ನೆಲೆಸಲು ಬಯಸುತ್ತಿದ್ದೇನೆ. ಅದಕ್ಕೆ ಅವಕಾಶ ಕೊಡಬೇಕು. ಆ ಜಾಗ ನನಗೆ ಸುರಕ್ಷವಾಗಿದೆ. ನಾನು ಉಳಿದುಕೊಳ್ಳುವ ಪಿಜಿಯ ವಿಳಾಸ ಬಹಿರಂಗಪಡಿಸುವುದಿಲ್ಲ. ನನಗೆ ಯಾವುದೇ ಪೊಲೀಸ್ ರಕ್ಷಣೆ ಸಹ ಬೇಡ ಎಂದು ವಿವರಿಸಿದರು.
ಈ ಅಂಶವನ್ನು ಒಪ್ಪಿದ ನ್ಯಾಯಪೀಠ, ಯುವತಿಯು ಬಯಸಿದ ಜಾಗದಲ್ಲಿ ನೆಲಸಲು ಅನುಮತಿ ನೀಡಿತು. ಅಲ್ಲದೆ, ಒಂದೊಮ್ಮೆ ಯುವತಿಗೆ ಯಾವುದೇ ಸಮಸ್ಯೆ ಎದುರಾದರೂ ಹತ್ತಿರದ ಪೊಲೀಸ್ ಠಾಣೆಯ ಮೊರೆ ಹೋಗಬಹುದು. ಸಂಬಂಧಪಟ್ಟ ಪೊಲೀಸರು ಯುವತಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ನಿರ್ದೇಶಿಸಿತು.
ಇದೇ ವೇಳೆ ಯುವತಿಯ ತಂದೆ ಪರ ವಕೀಲರು, ಅರ್ಜಿದಾರ ಯುವಕನೊಂದಿಗೆ ಚರ್ಚಿಸಿ (ಯುವತಿ ತಂದೆ) ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಮೇ 22 ರವರೆಗೆ ಸಮಯಾವಕಾಶ ಕಲ್ಪಿಸಿ ವಿಚಾರಣೆ ಮುಂದೂಡಿತು. ಅಂದು ಯುವತಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನಿರ್ದೇಶಿಸಿತು.
ಅನುಕೂಲಕರ ವಾತಾವರಣ ಕಲ್ಪಿಸಿದ ತಂದೆಗೆ ಮಗಳನ್ನು ವಶಕ್ಕೆ ಕೇಳಲು ಅವಕಾಶವಿಲ್ಲ: ಅಂತರ್ ಧರ್ಮೀಯ ದಂಪತಿ ವಿವಾಹವಾಗಿ, ಮಗುವಾದ ಬಳಿಕ ಮನಸ್ತಾಪದಿಂದ ಬೇರೆಯಾಗಿದ್ದು, ಪತ್ನಿ ಹೆಣ್ಣು ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಇದರಿಂದ ಪತಿಯು ತನ್ನ ಮಗಳನ್ನು ತನ್ನ ವಶಕ್ಕೆ ಪಡೆಯಲು ನ್ಯಾಯಾಂಗ ಹೋರಾಟ ಆರಂಭಿಸಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದರು.
ಜೊತೆಗೆ ಪ್ರತಿವಾದಿಗಳ ಪರ ವಕೀಲರು ಮಗಳು ತಂದೆಯೊಂದಿಗೆ ಚೆನ್ನಾಗಿದ್ದಾಳೆ ಎಂಬುದನ್ನು ತೋರಿಸುವುದಕ್ಕಾಗಿ ತಂದೆಯೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಿರುವ ಫೋಟೋಗಳನ್ನು ತೆಗೆಯುತ್ತಿದ್ದಾರೆ. ಇದು ನಿಯಮ ಬಾಹಿರವಾಗಿದ್ದು, ಮಗುವನ್ನು ತಂದೆಯ ವಶಕ್ಕೆ ನೀಡಬಾರದು ಎಂದು ಕೋರಿದ್ದರು. ಇದನ್ನು ಪರಿಶೀಲಿಸಿದ ಹೈಕೋರ್ಟ್ ಮಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ತನ್ನ ವಶಕ್ಕೆ ನೀಡಬೇಕು ಎಂದು ವಾದ ಮಂಡಿಸಲು ಅವಕಾಶವಿಲ್ಲ ಎಂದು ತಂದೆ ಕೋರಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿತ್ತು.
ಇದನ್ನೂ ಓದಿ: ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಹತ್ಯೆ.. ಅಪರಾಧಿಗೆ ಗಲ್ಲು ಶಿಕ್ಷೆ