ಬೆಂಗಳೂರು: ವಿವಾದಿತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ವಿಭಾಗೀಯ ಪೀಠ ಹಸಿರು ನಿಶಾನೆ ತೋರಿದೆ. ಗಣೇಶೋತ್ಸವ ಆಚರಣೆಗೆ ಆಸಕ್ತಿ ವಹಿಸಿ ಸಂಘ ಸಂಸ್ಥೆಗಳು ಸಲ್ಲಿಸುವ ಮನವಿಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರವು ಆಗಸ್ಟ್ 31ರಿಂದ ನಿರ್ಧಿಷ್ಟ ಸಮಯದ ಕಾಲಾವಕಾಶಕ್ಕೆ ಒಳಪಟ್ಟು ಅವಕಾಶ ನೀಡಬಹುದಾಗಿದೆ ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸೇರಿದಂತೆ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲವೆಂದು ಗುರುವಾರ ಹೈಕೋರ್ಟ್ ಏಕ ಸದಸ್ಯಪೀಠ ನೀಡಿದ್ದ ಆದೇಶದ ವಿರುದ್ದ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಚಾಮರಾಜಪೇಟೆ ಮೈದಾನ ಮಾಲೀಕತ್ವಕ್ಕೆ ಸಂಬಂಧಿಸಿ ಬಿಬಿಎಂಪಿ ಆದೇಶದ ವಿರುದ್ಧ ವಕ್ಫ್ ಬೋರ್ಡ್ ಹೈಕೋರ್ಟ್ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಗಲ್ಲ. ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಅವಕಾಶ ಕೊಡದಿದ್ರೆ ಬಿಜೆಪಿ ವಿರುದ್ಧ ಮನೆ ಮನೆ ಪ್ರಚಾರ: ಮುತಾಲಿಕ್
ಹೈಕೋರ್ಟ್ ಗಣೇಶೋತ್ಸವ ಆಚರಣೆಗೆ ಈದ್ಗಾ ಮೈದಾನದಲ್ಲಿ ಅವಕಾಶ ನೀಡುತ್ತಿದ್ದಂತೆ ನಾಗರಿಕ ಒಕ್ಕೂಟದ ವರು ಕೋರ್ಟ್ ಆದೇಶ ಸ್ವಾಗತಿಸಿ 'ಗಣಪತಿ ಬಪ್ಪ ಮೋರಯೋ' ಎಂದು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಯಥಾಸ್ಥಿತಿಗೆ ಹೈಕೋರ್ಟ್ ನಿರ್ದೇಶನ