ಬೆಂಗಳೂರು: ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ನೆಲವಾಗಿಲು ಗ್ರಾಮವನ್ನು ಸ್ಥಳಾಂತರಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದೆ. ಈ ಕುರಿತು 2011ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ಎಚ್ಚರಿಕೆ ನೀಡಿದೆ.
ಸರ್ಕಾರದ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ನೆಲವಾಗಿಲು ಗ್ರಾಮವನ್ನು ಕೋಡಿಯಾಲ ಬಳಿ ಗುರುತಿಸಿರುವ ಜಮೀನಿನಲ್ಲಿ ಸ್ಥಳಾಂತರಿಸುವ ಸಂಬಂಧ 1993ರ ಜೂ.9ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೇ 2018ರ ಡಿ.18ರಂದು ಹೈಕೋರ್ಟ್ ಸಹ ಆದೇಶ ನೀಡಿದೆ. ಸರ್ಕಾರ ಆದೇಶ ಹೊರಡಿಸಿ 27 ವರ್ಷ ಕಳೆದಿದೆ, ಹೈಕೋರ್ಟ್ ಆದೇಶ ನೀಡಿ 22 ತಿಂಗಳು ಕಳೆದಿದೆ. ಆದರೆ, ಗ್ರಾಮ ಸ್ಥಳಾಂತರಕ್ಕೆ ಯೋಜನೆಯಂತೆ 432 ಮನೆಗಳನ್ನು ನಿರ್ಮಿಸಬೇಕಿತ್ತು. ಆದರೆ, ಇವುಗಳ ಪೈಕಿ ಈವರೆಗೆ ಒಂದೇ ಒಂದು ಮನೆ ನಿರ್ಮಿಸಿಲ್ಲ, ಇದು ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿತು.
ಹೈಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಹೀಗಾಗಿ, ಜವಾಬ್ದಾರಿ ನಿರ್ವಹಿಸದ ತಪ್ಪಿತಸ್ಥ ಅಧಿಕಾರಿಗಳ ಹೆಸರು ಮತ್ತು ಹುದ್ದೆ ವಿವರಗಳನ್ನು ಒಳಗೊಂಡ ಪ್ರಮಾಣ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನವೆಂಬರ್ 10ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು.