ಬೆಂಗಳೂರು : ಬೆಳಗಾವಿ ಅಧಿವೇಶನ ನಡೆಸುವ ಸಂದರ್ಭದಲ್ಲಿ ಅವ್ಯವಹಾರ ನಡೆಸಿದ ಆರೋಪ ಸಂಬಂಧ ವಿಧಾನಸಭೆ ವಿಶೇಷ ಮಂಡಳಿ ನಡೆಸುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಎಸ್. ಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ತಮ್ಮ ವಿರುದ್ಧ ವಿಶೇಷ ಮಂಡಳಿ ನಡೆಸುತ್ತಿರುವ ಅರ್ಜಿ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿ ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್. ಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಗೌಡ ಅವರಿದ್ದ ಪೀಠ, ಈ ಆದೇಶ ನೀಡಿದೆ. ಹಾಗೆಯೇ, ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು 6 ತಿಂಗಳ ಒಳಗೆ ಪೂರ್ಣಗೊಳಿಸುವಂತೆ ವಿಶೇಷ ಮಂಡಳಿಗೆ ನಿರ್ದೇಶಿಸಿದೆ.
2016-17ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನಕ್ಕಾಗಿ ನಡೆಸಿದ್ದ ಕಾಮಗಾರಿ ಹಾಗೂ ಇತರೆ ಖರ್ಚು ವೆಚ್ಚದಲ್ಲಿ ಎಸ್. ಮೂರ್ತಿ ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿತ್ತು. ಈ ಆರೋಪ ಸಂಬಂಧ ವಿಚಾರಣೆ ನಡೆಸಿದ್ದ ವಿಧಾನಸಭಾಧ್ಯಕ್ಷರ ನೇತೃತ್ವದ ವಿಶೇಷ ಮಂಡಳಿ ಅಮಾನತಿಗೆ ಸೂಚಿಸಿತ್ತು. ಅದರಂತೆ ಮೂರ್ತಿ ಅವರನ್ನು ವಿಧಾನಸಭೆ ಅಧೀನ ಕಾರ್ಯದರ್ಶಿ ಅಮಾನತು ಮಾಡಿ 2018ರ ಡಿ.27ರಂದು ಆದೇಶ ಹೊರಡಿಸಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮೂರ್ತಿ ತಮ್ಮ ವಿರುದ್ಧ ದೋಷಾರೋಪ ಮಾಡುವ ಮುನ್ನ ವಿಶೇಷ ಮಂಡಳಿಯ ಅನುಮತಿ ಪಡೆದಿಲ್ಲ. ಆದ್ದರಿಂದ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಈ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್ ಅರ್ಜಿದಾರರನ್ನು ಅಮಾನತು ಮಾಡುವ ಸಂದರ್ಭದಲ್ಲಿ ಆರೋಪಗಳನ್ನು ವಿಶೇಷ ಮಂಡಳಿ ಪರಿಶೀಲಿಸಿದೆ. ಹೀಗಾಗಿ, ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.