ಬೆಂಗಳೂರು: ಉಪ ಲೋಕಾಯುಕ್ತ ಹುದ್ದೆಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿ ಆದೇಶಿಸಿದೆ.
ಉಪ ಲೋಕಾಯುಕ್ತರನ್ನು ನೇಮಕ ಮಾಡುವಾಗ ಅಗತ್ಯ ಪ್ರಕ್ರಿಯೆಗಳನ್ನು ಪಾಲಿಸಿಲ್ಲ. ಹೀಗಾಗಿ ಸರ್ಕಾರದ ನೇಮಕ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಎಸ್ ಆರ್ ಹಿರೇಮಠ ಅವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ನ್ಯಾ. ರವಿ ಮಳಿಮಠ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪು ನೀಡಿದ ಪೀಠ, ಸರ್ಕಾರ ನೇಮಕ ಪ್ರಕ್ರಿಯೆಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಅನುಸರಿಸಿದೆ. ಹೀಗಾಗಿ ಪಿಐಎಲ್ ಊರ್ಜಿತವಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.
2018 ರಲ್ಲಿ ಉಪಲೋಕಾಯುಕ್ತ ಸುಭಾಷ್ ಬಿ. ಆಡಿ ಅವರ ಅವಧಿ ಮುಗಿದ ಬಳಿಕ ಹುದ್ದೆ ಖಾಲಿ ಉಳಿದಿತ್ತು. ಈ ಜಾಗಕ್ಕೆ ಅರ್ಹರನ್ನು ಸೂಚಿಸುವಂತೆ ಸರ್ಕಾರ ಆಗಿನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಸಿಜೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಅವರ ಹೆಸರನ್ನು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸಿಜೆ ದಿನೇಶ್ ಮಹೇಶ್ವರಿ ಅವರು ಸುಪ್ರೀಂ ಕೋರ್ಟ್ಗೆ ಪದೋನ್ನತಿ ಹೊಂದಿ ಹೈಕೋರ್ಟ್ನಿಂದ ವರ್ಗಾವಣೆ ಆದ ಬಳಿಕ ಸರ್ಕಾರವೇ 2019ರ ನವೆಂಬರ್ 20 ರಂದು ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಬಿ ಎಸ್ ಪಾಟೀಲ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು.
ಸರ್ಕಾರ ನೇಮಕ ಆದೇಶ ಹೊರಡಿಸಿದ ಬಳಿಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಅವರು, ಉಪ ಲೋಕಾಯುಕ್ತರನ್ನು ನೇಮಕ ಮಾಡುವಾಗ ಮುಖ್ಯಮಂತ್ರಿಗಳು ಹಲವರ ಅಭಿಪ್ರಾಯ ಪಡೆದುಕೊಳ್ಳಬೇಕು. ಅದರಂತೆ ಹೈಕೋರ್ಟ್ ಸಿಜೆ, ವಿಧಾನಸಭೆ ಅಧ್ಯಕ್ಷರು, ಪರಿಷತ್ತಿನ ಸಭಾಪತಿ, ಉಭಯ ಸದನಗಳ ಪ್ರತಿಪಕ್ಷಗಳ ನಾಯಕರ ಜೊತೆಗೆ ಲಿಖಿತ ಸಮಾಲೋಚನೆ ನಡೆಸಬೇಕು. ಈ ಪ್ರಕ್ರಿಯೆ ವೇಳೆ ಸಿಜೆ ಅಭಿಪ್ರಾಯ ಆಲಿಸಿಲ್ಲ ಎಂದು ದೂರಿದ್ದರು. ಜೊತೆಗೆ ನೇಮಕ ಆದೇಶ ರದ್ದುಗೊಳಿಸುವಂತೆ ಕೋರಿದ್ದರು.