ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಇದೇ ವೇಳೆ, ದೂರುದಾರರು ತಮ್ಮ ಅರ್ಜಿಯೊಂದಿಗೆ ಆರೋಪ ಸತ್ಯ ಎಂದು ಪ್ರಮಾಣೀಕರಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಹಾಗೂ ಇದಕ್ಕೆ ವಿಚಾರಣಾ ನ್ಯಾಯಾಲಯ ಅನುಮತಿಸುವಂತೆ ಸೂಚಿಸಿದೆ. ಅಕ್ರಮ ಆಸ್ತಿಗಳಿಕೆ ವಿಚಾರವಾಗಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಚಿವ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
2012ರಲ್ಲಿ ಸಿ.ಟಿ.ರವಿ ವಿರುದ್ಧ ಅಕ್ರಮ ಆಸ್ತಿಗಳಿಕೆ ಆರೋಪ ಮಾಡಿ ಎ.ಸಿ ಕುಮಾರ್ ಎಂಬುವರು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. 2004 ರಿಂದ 2010ರ ನಡುವಿನ ಆದಾಯ 49 ಲಕ್ಷದಿಂದ 3.18 ಕೋಟಿಗೆ ಏರಿಕೆಯಾಗಿದೆ. ಈ ಅಕ್ರಮ ಸಂಪತ್ತಿನ ಕುರಿತು ತನಿಖೆಯಾಗಬೇಕು ಎಂದು ದೂರು ಸಲ್ಲಿಸಿದ್ದರು. 2016ರಲ್ಲಿ ವಿಚಾರಣಾ ನ್ಯಾಯಾಲಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಆದೇಶಿಸಿತ್ತು.
ಈ ದೂರು ಹಾಗೂ ಪ್ರಕರಣದ ವಿಚಾರಣೆ ರದ್ದುಗೊಳಿಸುವಂತೆ ಕೋರಿ ಸಿ.ಟಿ. ರವಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಸಿ.ಟಿ. ರವಿ ಪರ ವಕೀಲರು, ದೂರುದಾರರು ಪಿಸಿಆರ್ ದಾಖಲಿಸುವ ಸಂದರ್ಭದಲ್ಲಿ ತಮ್ಮ ಆರೋಪ ಸತ್ಯ ಎಂದು ಪ್ರಮಾಣಿಸಿ ಸಲ್ಲಿಸುವ ಅಫಿಡವಿಟ್ ಸಲ್ಲಿಸಿಲ್ಲ. ಸುಪ್ರೀಂ ಕೋರ್ಟ್ ಖಾಸಗಿ ದೂರುಗಳ ಕುರಿತು ನ್ಯಾಯಾಲಯಗಳು ತನಿಖೆಗೆ ಆದೇಶಿಸುವ ಅಥವಾ ವಿಚಾರಣೆ ಆರಂಭಿಸುವ ಮೊದಲು ದೂರುದಾರರಿಂದ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಪ್ರಕರಣದಲ್ಲಿ ಈ ನಿಯಮವನ್ನು ಪಾಲಿಸಿಲ್ಲ. ಆದ್ದರಿಂದ ದೂರು ಹಾಗೂ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಸರ್ಕಾರದ ಪರ ವಕೀಲರು ವಾದಿಸಿ, ಪ್ರಕರಣವನ್ನು ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ದಾಖಲಿಸಲಾಗಿದೆ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಅಂಶವನ್ನು ಪರಿಗಣಿಸಿರುವ ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶದಂತೆ ಕಾಯ್ದೆಗೆ ತಿದ್ದುಪಡಿ ತರಬೇಕಿತ್ತು. ಆದರೆ, ತಿದ್ದುಪಡಿಯಾಗದೇ ಇರುವುದರಿಂದ ಸುಪ್ರೀಂ ಆದೇಶವನ್ನು ಪಾಲಿಸಬೇಕಾಗುತ್ತದೆ. ಅದರಂತೆ ದೂರುದಾರರು ತಮ್ಮ ಅರ್ಜಿಗೆ ಪೂರಕವಾಗಿ ಪ್ರಮಾಣಪತ್ರ ಸಲ್ಲಿಸಬೇಕು. ಇದಕ್ಕೆ ವಿಚಾರಣಾ ನ್ಯಾಯಾಲಯ ಅವಕಾಶ ಮಾಡಿಕೊಡಬೇಕು ಎಂದು ಆದೇಶಿಸಿದೆ.