ಬೆಂಗಳೂರು: ಕೋವಿಡ್-19 ಸೋಂಕಿಗೆ ತುತ್ತಾಗಿ ಮೃತಪಟ್ಟವರ ಶವಸಂಸ್ಕಾರ ನಡೆಸುವ ವೇಳೆ ಸ್ಮಶಾನ ಅಥವಾ ಚಿತಾಗಾರಕ್ಕೆ 20ಕ್ಕಿಂತ ಹೆಚ್ಚು ಜನರಿಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಪತ್ತು ನಿರ್ವಹಣಾ ಕಾಯ್ದೆಯ ನಿಯಮಗಳ ಪ್ರಕಾರ, ಸ್ಮಶಾನ ಅಥವಾ ಚಿತಾಗಾರದಲ್ಲಿ ಕೋವಿಡ್ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸುವ ಸಂದರ್ಭದಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅದು ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಕೋವಿಡ್ ಶಂಕಿತ ಮೃತದೇಹದ ಸ್ವ್ಯಾಬ್ ಸಂಗ್ರಹಿಸಿದ ಕೂಡಲೇ ವರದಿಯನ್ನು ಸಂಬಂಧಿಕರಿಗೆ ನೀಡಬೇಕು. ಅನಗತ್ಯವಾಗಿ ವಿಳಂಬ ಮಾಡಬಾರದು ಹಾಗೂ ಲ್ಯಾಬ್ ಪರೀಕ್ಷೆ ವರದಿ ಬರುವವರೆಗೂ ಮೃತದೇಹವನ್ನು ಇಟ್ಟುಕೊಳ್ಳಬಾರದು. ಮೃತದೇಹ ಹಸ್ತಾಂತರಿಸುವಾಗ ಏನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬ ಮಾಹಿತಿಯನ್ನು ಸಂಬಂಧಿಕರಿಗೆ ಕೊಡಬೇಕು ಎಂದು ಪೀಠ ನಿರ್ದೇಶಿಸಿದೆ.