ಬೆಂಗಳೂರು: ಶಾಲಾ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಅಗತ್ಯ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಏ.16ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯದಲ್ಲಿರುವ ಶಾಲೆಗಳ ಸ್ಥಿತಿಗತಿ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ. ಬಿ. ವಿ.ನಾಗರತ್ನ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿದೆ. ಶುಚಿ ಯೋಜನೆ ಅಡಿ 2021-22ನೇ ಸಾಲಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್/ ಪ್ಯಾಡ್ ಖರೀದಿಗೆ ಯಾವಾಗ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂಬ ಕುರಿತು ವಿವರವಾದ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿರುವ 10 ರಿಂದ 19 ವರ್ಷದೊಳಗಿನ 17,06,933 ಬಾಲಕಿಯರಿಗೆ ಸರ್ಕಾರ ಮೊದಲು ನ್ಯಾಪ್ಕಿನ್ ನೀಡಿತ್ತು.
ಆದರೆ ಆರ್ಥಿಕ ಸಂಕಷ್ಟದ ಕಾರಣಕ್ಕೆ 2019-20, 2020-21ನೇ ಸಾಲಿನಲ್ಲಿ ಇದಕ್ಕೆ ಹಣಕಾಸು ನಿಗದಿ ಮಾಡದಿರುವುದು ಸರಿಯಲ್ಲ. ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡುವುದು ಮತ್ತು ಸ್ಯಾನಿಟರಿ ನ್ಯಾಪ್ಕಿನ್ ನೀಡುವುದು ಸಬಲೀಕರಣದ ಸಂಕೇತ. ಹೀಗಾಗಿ ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರು ಮತ್ತು ಯುವತಿಯರ ಸಬಲೀಕರಣದ ಉದ್ದೇಶವಿದ್ದರೆ ಮೊದಲು ಈ ಸೌಲಭ್ಯಗಳನ್ನು ಒದಗಿಸಿ ಎಂದು ನ್ಯಾಯಾಲಯ ಸೂಚಿಸಿದೆ. ಅಲ್ಲದೇ, ಸಂವಿಧಾನದ ಕಲಂ 21 (ಎ) ಪ್ರಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆ ಮೂಲಭೂತ ಹಕ್ಕಿನ ವ್ಯಾಪ್ತಿಯಲ್ಲಿ ವಯಸ್ಕ ಬಾಲಕಿಯರಿಗೆ ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್/ ಪ್ಯಾಡ್ ಕೂಡ ಒದಗಿಸಲೇಬೇಕು ಎಂದು ಪೀಠ ಸರ್ಕಾರಕ್ಕೆ ತಾಕೀತು ಮಾಡಿದೆ.